ಗುವಾಹಟಿ: ಅಸ್ಸೋಂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಣ ಎಗರಿಸಿದ ಆರೋಪದ ಮೇಲೆ ಐವರನ್ನು ಬಂಧಿಸಲಾಗಿದೆ ಎಂದು ಸಿಎಂ ವಿಶೇಷ ವಿಜಿಲೆನ್ಸ್ ಸೆಲ್ನ ಅಧಿಕಾರಿಗಳು ತಿಳಿಸಿದ್ದಾರೆ.
ಅಸ್ಸೋಂ ಸಿಎಂ ಪರಿಹಾರ ನಿಧಿಯಿಂದ ಹಣ ಎಗರಿಸಿದ ಐವರ ಬಂಧನ - ಅಸ್ಸೋಂ
ಅಸ್ಸೋಂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಣ ಎಗರಿಸಿದ ಆರೋಪದ ಮೇಲೆ ಉತ್ತರ ಪ್ರದೇಶ ಮೂಲದ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಎಂ ವಿಶೇಷ ವಿಜಿಲೆನ್ಸ್ ಸೆಲ್ನ ಪೊಲೀಸ್ ವರಿಷ್ಠಾಧಿಕಾರಿ ರೋಸಿ ಕಲಿತಾ ಹೇಳಿದ್ದಾರೆ.
ಮೊಹಮ್ಮದ್ ಆರಿಫ್, ಮೊಹಮ್ಮದ್ ಆಸಿಫ್, ಶ್ರೀ ಲಾಲ್ಜಿ, ಸರ್ವೇಶ್ ರಾವ್ ಮತ್ತು ರವೀಂದ್ರ ಕುಮಾರ್ ಬಂಧಿತ ಆರೋಪಿಗಳು. ಇವರೆಲ್ಲರೂ ಉತ್ತರ ಪ್ರದೇಶದ ಬಸ್ತಿ, ಗೋರಖ್‌ಪುರ ಮತ್ತು ಲಖನೌ ಜಿಲ್ಲೆಯವರು ಎಂಬುದು ತಿಳಿದುಬಂದಿದೆ.
ಆಗಸ್ಟ್ 10 ರಂದು ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ ಅಕ್ರಮವಾಗಿ ಕೆಲವು ವಹಿವಾಟುಗಳು ನಡೆದಿರುವುದು ಕಂಡು ಬಂದಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಸಿಎಂ ಸರ್ಬಾನಂದ ಸೋನೊವಾಲ್ ನನಗೆ ಸೂಚನೆ ನೀಡಿದರು. ಆಗಸ್ಟ್ 12 ರಂದು ದೂರು ನೀಡಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಆಗಸ್ಟ್ 27 ರಂದು ಬಸ್ತಿ, ಗೋರಖ್‌ಪುರ ಮತ್ತು ಲಖನೌ ಜಿಲ್ಲೆಯಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಎಂ ವಿಶೇಷ ವಿಜಿಲೆನ್ಸ್ ಸೆಲ್ನ ಪೊಲೀಸ್ ವರಿಷ್ಠಾಧಿಕಾರಿ ರೋಸಿ ಕಲಿತಾ ಹೇಳಿದ್ದಾರೆ.