ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ನಿತ್ಯ 12 ರಿಂದ 15 ಮಕ್ಕಳು ನಾಪತ್ತೆಯಾಗುತ್ತಿದ್ದಾರೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
ದೆಹಲಿಯ ಪ್ರತಿಯೊಂದು ಪೊಲೀಸ್ ಠಾಣೆಗಳಲ್ಲಿ ಅಪರಾಧ ಶಾಖೆ ಹಾಗೂ ಮಾನವ ಕಳ್ಳಸಾಗಣೆ ವಿರೋಧಿ ಘಟಕವನ್ನು ಸ್ಥಾಪಿಸಲಾಗಿದ್ದರೂ ಕೂಡ ನಾಪತ್ತೆಯಾದವರಲ್ಲಿ ಕೇವಲ ಶೇ.60 ರಿಂದ ಶೇ.70 ಮಕ್ಕಳು ಮಾತ್ರ ಪತ್ತೆಯಾಗುತ್ತಿದ್ದಾರೆ.
ಅದರಲ್ಲಿಯೂ ದೆಹಲಿ ಹೊರವಲಯದ ಪ್ರದೇಶಗಳಾದ ಅಮನ್ ವಿಹಾರ್, ಪ್ರೇಮ್ ನಗರ, ಅಗರ್ ನಗರ, ಕಿರಾಡಿ ಹಾಗೂ ರಾಣ್ಹೌಲಾದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಈ ಪ್ರದೇಶಗಳಲ್ಲಿ ನಿತ್ಯ ಒಬ್ಬ ಮಗುವಂತೂ ಕಾಣೆಯಾಗುತ್ತಲೇ ಇದೆ ಎಂದು ಸ್ಥಳೀಯರು ಹೇಳಿದ್ದಾರೆ.
ಇದನ್ನೂ ಓದಿ: ಪ್ರತ್ಯೇಕ ಪ್ರಕರಣದಲ್ಲಿ ಒಂದೇ ಗ್ರಾಮದ ಯುವಕ, ಯುವತಿ ನಾಪತ್ತೆ
2019ರ ಅಕ್ಟೋಬರ್ನಲ್ಲಿ ಇಂದ್ರಾ ಎನ್ಕ್ಲೇವ್ ಪ್ರದೇಶದಿಂದ ಕಾಣೆಯಾಗಿದ್ದ 10 ವರ್ಷದ ನರ್ಸಿನ್ ಎಂಬ ಬಾಲಕ ಇನ್ನೂ ಸಿಕ್ಕಿಲ್ಲ. 2017ರಲ್ಲಿ ಅಮನ್ ವಿಹಾರ್ ಪ್ರದೇಶದಿಂದ ನಾಪತ್ತೆಯಾಗಿದ್ದ ರವೀನಾ ಎಂಬ ಬಾಲಕಿ 3 ವರ್ಷ ಕಳೆದರೂ ಈಕೆ ಬಗ್ಗೆ ಸುಳಿವು ಸಿಕ್ಕಿಲ್ಲ.
ದೆಹಲಿಯಲ್ಲಿ ಮಕ್ಕಳ ನಾಪತ್ತೆ ಪ್ರಕರಣಗಳು 2019ರಲ್ಲಿ ಒಟ್ಟು 5,412 ಮಕ್ಕಳು ಕಾಣೆಯಾಗಿದ್ದು, 3336 ಮಕ್ಕಳನ್ನು ಪತ್ತೆ ಮಾಡಲಾಗಿದೆ. 2020ರ ಅಕ್ಟೋಬರ್ ವರೆಗೆ 3507 ಮಕ್ಕಳು ನಾಪತ್ತೆಯಾಗಿದ್ದು, 2,629 ಮಕ್ಕಳು ಸಿಕ್ಕಿದ್ದಾರೆ. ಕೆಲ ಪೊಲೀಸರು ದೂರು ದಾಖಲಿಸಿಕೊಂಡು ಪೋಷಕರಿಗೆ ಮಕ್ಕಳನ್ನು ಹುಡುಕುವ ಭರವಸೆ ನೀಡಿದರೆ, ಇನ್ನೂ ಕೆಲ ಪೊಲೀಸರು ಹುಡುಕಿಕೊಡುವ ಯಾವುದೇ ವಿಶೇಷ ಪ್ರಯತ್ನಗಳನ್ನ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.