ಜಿಂದ್(ಹರಿಯಾಣ):ಮಂಗಳವಾರ ತಡರಾತ್ರಿ ಜಿಂದ್ ಜಿಲ್ಲೆಯಲ್ಲಿ ಆಟೋ-ತೈಲ ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 10 ಮಂದಿ ಯುವಕರು ಸಾವನ್ನಪ್ಪಿದ್ದಾರೆ.
ಜಿಂದ್ ಜಿಲ್ಲೆಯ ರಾಮರಾಯ್ ಗ್ರಾಮದಲ್ಲಿ ಅಪಘಾತ ನಡೆದಿದ್ದು, ಮೃತರೆಲ್ಲರೂ ಹಿಸ್ಸಾರ್ನಲ್ಲಿ ನಡೆದ ಸೇನಾ ನೇಮಕಾತಿ ಮುಗಿಸಿ ತಮ್ಮ ಮನೆಗಳಿಗೆ ಹಿಂತಿರುಗುತ್ತಿದ್ದರು.
ಸೇನಾ ನೇಮಕಾತಿ ತೇರ್ಗಡೆಯಾದ ಯುವಕರು ವಿಧಿಯಾಟಕ್ಕೆ ಬಲಿ..! ತೈಲ ಟ್ಯಾಂಕರ್ ರಭಸವಾಗಿ ಗುದ್ದಿದ ಪರಿಣಾಮ ಆಟೋದಲ್ಲಿದ್ದ ಹತ್ತು ಮಂದಿಯೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಾಹಿತಿ ಪ್ರಕಾರ ಸಾವನ್ನಪ್ಪಿದ ಎಲ್ಲರೂ ಸೇನೆ ನೇಮಕಾತಿಯ ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು.
ಸದ್ಯ ಮೃತರಲ್ಲಿ ಮೂವರ ಗುರುತು ಪತ್ತೆಹಚ್ಚಲಾಗಿದ್ದು, ಉಳಿದವರ ಗುರುತು ಕಂಡುಹಿಡಿಯಲು ಸ್ಥಳೀಯರನ್ನು ಬಳಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.