ವಾಷಿಂಗ್ಟನ್:ರಷ್ಯಾದ ದಾಳಿಗೆ ಒಳಗಾಗಿರುವ ಉಕ್ರೇನ್ಗೆ ಪಾಶ್ಚಿಮಾತ್ಯ ರಾಷ್ಟ್ರಗಳ ನೆರವು ಮುಂದುವರೆದಿದೆ. ಕ್ಷಿಪಣಿಗಳು ಸೇರಿದಂತೆ 1.8 ಬಿಲಿಯನ್ ಡಾಲರ್ ನೆರವು ನೀಡುವುದಾಗಿ ಅಮೆರಿಕ ಘೋಷಿಸಿದ್ದು, ಇದಕ್ಕೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ರಿಗೆ ಧನ್ಯವಾದ ಹೇಳಿದ್ದಾರೆ.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ರಷ್ಯಾ ವಿರುದ್ಧದ ಹೋರಾಟದಲ್ಲಿ ಅಮೆರಿಕದ ನೆರವು ಸಮಯೋಚಿತವಾಗಿದೆ. ಪೇಟ್ರಿಯಾಟ್ ಕ್ಷಿಪಣಿಗಳ ಪೂರೈಕೆಗೆ ಜೋ ಬೈಡನ್ ಅವರಿಗೆ ಉಕ್ರೇನ್ ಧನ್ಯವಾದ ಸಲ್ಲಿಸುತ್ತದೆ ಎಂದು ಹೇಳಿದರು.
ದಾಳಿಗೀಡಾಗಿರುವ ಉಕ್ರೇನ್ಗೆ ಕ್ಷಿಪಣಿಗಳ ನೆರವು ಬಲ ತುಂಬಲಿದೆ. ನಮ್ಮ ವಾಯುಪ್ರದೇಶವನ್ನು ರಕ್ಷಿಸಿಕೊಳ್ಳಲು ಇವು ನೆರವಾಗಲಿವೆ. ಇದೊಂದು ಮಹತ್ತರ ಹೆಜ್ಜೆಯಾಗಿದ್ದು, ದಾಳಿಕೋರ ರಾಷ್ಟ್ರವನ್ನು ಮಣಿಸಲು ಸಾಧ್ಯವಾಗಲಿದೆ ಎಂದು ಝೆಲೆನ್ಸ್ಕಿ ಅಭಿಪ್ರಾಯಪಟ್ಟರು.