ಲಿವಿವ್(ಉಕ್ರೇನ್):ಈ ವಾರ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯಲಿರುವ ಶಾಂತಿ ಮಾತುಕತೆ ವೇಳೆ ಉಕ್ರೇನ್‌ನ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಮೊದಲ ಆದ್ಯತೆ ನೀಡುವುದಾಗಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ನಮಗೆ ಶೀಘ್ರವಾಗಿಯೇ ಶಾಂತಿ ಬೇಕಾಗಿದೆ. ತಡಮಾಡದೇ ಶಾಂತಿ ಮಾತುಕತೆ ನಡೆಯಬೇಕಿದೆ ಎಂದಿರುವ ಉಕ್ರೇನ್ ಅಧ್ಯಕ್ಷರು, ಟರ್ಕಿಯಲ್ಲಿ ಮುಖಾಮುಖಿ ಭೇಟಿಗೆ ಅವಕಾಶ ಕಲ್ಪಿಸಬೇಕಾದ ಅವಶ್ಯಕತೆ ಇದೆ ಎಂದಿದ್ದಾರೆ.
ಮರಿಯುಪೋಲ್ ನಗರದಲ್ಲಿ ಪರಿಸ್ಥಿತಿ ಭೀಕರವಾಗಿದೆ. ಇಂತಹ ಸನ್ನಿವೇಶಗಳ ಬಗ್ಗೆ ತಾವು ಇತರ ದೇಶಗಳ ಸಂಸತ್ಗಳ ಗಮನಕ್ಕೆ ತರುವುದನ್ನು ಮುಂದುವರೆಸುತ್ತೇನೆ. ರಷ್ಯಾದ ಮಾರಕ ದಾಳಿಯನ್ನು ಎದುರಿಸಿ ದಿಟ್ಟ ಉತ್ತರ ನೀಡುತ್ತಿರುವ ಉಕ್ರೇನ್‌ನ ಸಶಸ್ತ್ರ ಪಡೆಗಳಿಗೆ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ ಎಂದು ಝೆಲೆನ್ಸ್ಕಿ ಹೇಳಿದರು. ಕೆಲವು ಪ್ರದೇಶಗಳಲ್ಲಿ ರಷ್ಯಾ ಆಕ್ರಮಣವನ್ನು ನಮ್ಮ ಸೈನಿಕರು ಹಿಮ್ಮೆಟ್ಟಿಸುತ್ತಿದ್ದಾರೆ ಎಂದು ಉಕ್ರೇನ್ ಸೈನಿಕರ ಬೆನ್ನು ತಟ್ಟಿದರು.