ಬೆಂಗಳೂರು: ಇಸ್ರೇಲ್ ವಿರುದ್ಧ ಯುದ್ಧ ಆರಂಭಿಸಿದ ಹಮಾಸ್ ಉಗ್ರರು ಅನೇಕ ಇಸ್ರೇಲಿಗರನ್ನು ಅಪಹರಿಸಿ, ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ. ಈ ಒತ್ತೆಯಾಳುಗಳನ್ನು ಬಿಡಿಸಿಕೊಂಡು ಬರುವ ಕುರಿತು ಇಸ್ರೇಲ್ ಸತತವಾಗಿ ಕಾರ್ಯನಿರತವಾಗಿದೆ. ಅಲ್ಲದೇ ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದೆ. ಅಪಹರಣದ ಗುಂಪಿನಲ್ಲಿ ಅತ್ಯಂತ ಕಿರಿಯ ಒತ್ತೆಯಾಳುವಾಗಿರುವ ಮಗುವಿಗೆ ಇದೀಗ ಒಂದು ವರ್ಷ ತುಂಬಿದ್ದು, ಮೊದಲ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಸ್ರೇಲಿಗರು ಆಕೆಯ ಸುರಕ್ಷಿತ ಬಿಡುಗಡೆಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಅಕ್ಟೋಬರ್ 7ರಂದು ಅಪ್ರಚೋದಿತ ದಾಳಿ ನಡೆಸಿದ್ದ ಹಮಾಸ್ ಉಗ್ರರು ಕಿಬ್ಬುತ್ಜ್ ನಿರ್ ಓಜ್ ಎಂಬಲ್ಲಿಂದ ಯಾರ್ಡನ್ ಮತ್ತು ಶಿರಿ ಪೋಷಕರೊಂದಿಗೆ ಅವರ ನಾಲ್ಕು ವರ್ಷದ ಏರಿಯಲ್ ಎಂಬ ಗಂಡು ಮಗು ಮತ್ತು ಕಿಫೀರ್ ಬಿಬಾಸ್ ಎಂಬ ಹಸುಳೆಯನ್ನು ಅಪಹರಿಸಿದ್ದರು. ಗುರುವಾರ ಟೆಲ್ ಅವಿವ್ನಲ್ಲಿನ ಹೋಸ್ಟೇಜ್ ಸ್ಕ್ವೇರ್‌ನಲ್ಲಿ (ಒತ್ತೆಯಾಳುಗಳ ಚೌಕ) ಅನೇಕರು ಕಿತ್ತಾಳೆ ಬಣ್ಣದ ಬಲೂನ್ ಹಿಡಿದು ಪ್ರಾರ್ಥಿಸಿದರು.
ನವೆಂಬರ್ 29ರ ಕದನ ವಿರಾಮ ಒಪ್ಪಂದದಲ್ಲಿ ಬಿಡುಗಡೆಯಾದ 13 ವರ್ಷದ ಗಾಲಿ ತಾರ್ಶನ್ಸ್ಕಿ ಎಂಬಾತನನ್ನು ಹಮಾಸ್ ಬಿಡುಗಡೆ ಮಾಡಿತ್ತು. ಈ ಬಾಲಕ ಕೂಡ ಸಾಮಾಜಿಕ ಜಾಲತಾಣದಲ್ಲಿ ಕಿಫೀರ್ಗೆ ಶುಭ ಕೋರಿದ್ದು, ನೀನು ಸುರಕ್ಷಿತವಾಗಿ ಬೇಗ ಹಿಂದಿರುಗಲು ಕಾಯುತ್ತಿದ್ದೇವೆ. ನೀನು ಮರಳಿದಾಗ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸೋಣ ಎಂದು ಬರೆದಿದ್ದಾನೆ.
ಹಮಾಸ್ ಉಗ್ರರ ಸೆರೆಯಿಂದ ಬಿಡಿಸಿಕೊಂಡು ಬಂದ ಮಕ್ಕಳು, ಇನ್ನೂ ಒತ್ತೆಯಾಳುಗಳಾಗಿರುವ ಮಕ್ಕಳಿಗೆ ಶುಭಾಶಯಗಳನ್ನು ತಿಳಿಸುವ ಮೂಲಕ ಅವರ ಬಿಡುಗಡೆಗೆ ಹಾರೈಸುತ್ತಿದ್ದಾರೆ. ಪೋಷಕರೊಂದಿಗೆ ಉಗ್ರರ ಸೆರೆಯಾಗಿದ್ದ ನಾಲ್ಕು ವರ್ಷದ ಒರಿಯಾ ಬ್ರಾಡ್ಚ್ ಎಂಬ ಮಗು ಕೂಡ ಕಳೆದ ನವೆಂಬರ್ 26ರಂದು ಬಿಡುಗಡೆಯಾಗಿದ್ದು, ಕಿಫೀರ್ ಹುಟ್ಟುಹಬ್ಬಕ್ಕೆ ಶುಭಕೋರಿ, ಬೇಗ ಮನೆಗೆ ಹಿಂದಿರುಗುವಂತೆ ಪ್ರಾರ್ಥಿಸಿದೆ.