ಬೀಜಿಂಗ್:ಚೀನಾದಲ್ಲಿ ತಮ್ಮದೇ ರಾಜಕೀಯ ತಂತ್ರಗಾರಿಕೆಯಿಂದ ಪ್ರಾಬಲ್ಯ ಸಾಧಿಸಿರುವ ಕ್ಸಿ ಜಿನ್‌ಪಿಂಗ್ ದಾಖಲೆಯ ಮೂರನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶನಿವಾರದಿಂದ ನಡೆದ ಕಮ್ಯುನಿಸ್ಟ್ ಪಕ್ಷದ ಸಭೆಯಲ್ಲಿ ಕ್ಸಿ ಜಿನ್ಪಿಂಗ್ರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ಕೂಡ ನೇಮಿಸಲಾಗಿದೆ.
69 ವರ್ಷದ ಕ್ಸಿ ಜಿನ್‌ಪಿಂಗ್ ಪಕ್ಷದ ಸಂಸ್ಥಾಪಕ ಮಾವೋ ಝೆಡಾಂಗ್ರ ನಂತರ ಅತ್ಯಂತ ಶಕ್ತಿಶಾಲಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಪಕ್ಷದ ಯಾವುದೇ ನಾಯಕರ ಅಧಿಕೃತ ನಿವೃತ್ತಿ ವಯಸ್ಸು 68. ಕ್ಸಿ ಜಿನ್‌ಪಿಂಗ್ ಇದನ್ನು ದಾಟಿ 10 ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದರೂ ಮೂರನೇ ಬಾರಿಗೆ ಡ್ರ್ಯಾಗನ್ ದೇಶದ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.
ಇದೇ ವೇಳೆ ಕಮ್ಯುನಿಸ್ಟ್ ಪಕ್ಷದ ಎರಡನೇ ಪ್ರಭಾವಿ ನಾಯಕ ಪ್ರೀಮಿಯರ್ ಲಿ ಕೆಕಿಯಾಂಗ್ ಸೇರಿದಂತೆ ಹಲವು ಹಿರಿಯ ನಾಯಕರು ಕೇಂದ್ರ ಸಮಿತಿಗೆ ಮರು ಆಯ್ಕೆಯಾಗಲು ವಿಫಲರಾಗಿ ನಿವೃತ್ತರಾದರು. ಸರ್ಕಾರದ ನೀತಿ ನಿಯಮ ರೂಪಿಸುವ ಕೇಂದ್ರ ಸಮಿತಿಗೆ 25 ಸದಸ್ಯರನ್ನು ಭಾನುವಾರ ಆಯ್ಕೆ ಮಾಡಲಾಯಿತು.