ವಾಷಿಂಗ್ಟನ್ (ಅಮೆರಿಕ): ಆಸ್ಟ್ರಿಯಾದ ರಾಜಧಾನಿ ವಿಯೆನ್ನಾವನ್ನು 2023 ರಲ್ಲಿ ವಿಶ್ವದ "ಅತ್ಯಂತ ವಾಸಯೋಗ್ಯ ನಗರ" ಎಂದು ಹೆಸರಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ತನ್ನ ವಿಶ್ವಾಸಾರ್ಹ ಮೂಲಸೌಕರ್ಯ, ಅಸಾಧಾರಣ ಸಂಸ್ಕೃತಿ ಮತ್ತು ಮನರಂಜನೆ, ಅತ್ಯುತ್ತಮ ಶಿಕ್ಷಣ ಮತ್ತು ಆರೋಗ್ಯ ಸೇವೆಗಳಿಗಾಗಿ ಪ್ರಶಂಸೆ ಗಳಿಸಿರುವ ವಿಯೆನ್ನಾಗೆ "ಅತ್ಯಂತ ವಾಸಯೋಗ್ಯ ನಗರ" ಎಂಬ ಕಿರೀಟ ಲಭ್ಯವಾಗಿದೆ.
ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (ಇಐಯು) ಸಂಸ್ಥೆಯು 173 ನಗರಗಳ ಶ್ರೇಯಾಂಕವನ್ನು ಬುಧವಾರ ಬಿಡುಗಡೆ ಮಾಡಿದೆ. ಈ ವರದಿಯು ಆರೋಗ್ಯ ರಕ್ಷಣೆ, ಶಿಕ್ಷಣ, ಸ್ಥಿರತೆ, ಮೂಲಸೌಕರ್ಯ ಮತ್ತು ಪರಿಸರ ಸೇರಿದಂತೆ ಹಲವಾರು ಮಹತ್ವದ ಅಂಶಗಳನ್ನು ಆಧರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈಗಾಗಲೇ ಹಲವಾರು ಬಾರಿ ಅಗ್ರ ಸ್ಥಾನ ಪಡೆದುಕೊಂಡಿರುವ ವಿಯೆನ್ನಾ ಈ ಬಾರಿ ಮತ್ತೆ ಆ ಸ್ಥಾನಕ್ಕೇರಿದೆ. ಹಾಗೆಯೇ ಈ ಪಟ್ಟಿಯಲ್ಲಿ ಡೆನ್ಮಾರ್ಕ್‌ನ ರಾಜಧಾನಿ ಕೋಪನ್ ಹ್ಯಾಗನ್ ತನ್ನ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ.
ಇತ್ತೀಚಿನ ವರ್ಷಗಳಲ್ಲಿ ಆಸ್ಟ್ರೇಲಿಯಾದ ಎರಡು ನಗರಗಳಾದ ಮೆಲ್ಬೋರ್ನ್ ಮತ್ತು ಸಿಡ್ನಿ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದಿವೆ. ಕೆನಡಾದ ಮೂರು ನಗರಗಳಾದ ಕ್ಯಾಲ್ಗರಿ, ವ್ಯಾಂಕೋವರ್ ಮತ್ತು ಟೊರೊಂಟೊ ಸಹ ಟಾಪ್ 10 ರಲ್ಲಿ ಸ್ಥಾನ ಪಡೆದರೆ, ಸ್ವಿಟ್ಜರ್ಲೆಂಡ್ ಎರಡು ನಗರಗಳು ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಜ್ಯೂರಿಚ್ ಆರನೇ ಸ್ಥಾನ ಮತ್ತು ಜಿನೀವಾ ಕ್ಯಾಲ್ಗರಿಯೊಂದಿಗೆ ಏಳನೇ ಸ್ಥಾನ ಪಡೆದುಕೊಂಡಿದೆ.