ವಿಶ್ವಸಂಸ್ಥೆ:ಜಗತ್ತಿನ ಮೂಲೆ ಮೂಲೆಯಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲೆ ದಾಳಿ ನಡೆಯುತ್ತಿದೆ. ಪತ್ರಕರ್ತರ ಬಂಧನ ಮತ್ತು ಸೆರೆವಾಸವನ್ನು ನಿಲ್ಲಿಸುವಂತೆ ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಕರೆ ನೀಡಿದರು. ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ಅಂಗವಾಗಿ ಮಂಗಳವಾರ ನೀಡಿದ ವಿಡಿಯೋ ಸಂದೇಶದಲ್ಲಿ ಅವರು ಪತ್ರಿಕಾ ಸ್ವಾತಂತ್ರ್ಯದ ಮೇಲಾಗುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿದರು.
ಪ್ರಪಂಚದ ಹಲವೆಡೆ ಮಾಧ್ಯಮ ಸ್ವಾತಂತ್ರ್ಯದ ಮೇಲೆ ದಾಳಿ ನಡೆಯುತ್ತಿದೆ. ಪತ್ರಕರ್ತರು ತಮ್ಮ ಕೆಲಸದ ವೇಳೆ ದಬ್ಬಾಳಿಕೆಗೆ ಒಳಗಾಗಿ ಬಂಧನವಾಗುತ್ತಿದ್ದಾರೆ. ಇದು ನಿಲ್ಲಬೇಕು. ಈ ಬಗ್ಗೆ ವಿಶ್ವ ಸಮುದಾಯ ಏಕಧ್ವನಿಯಲ್ಲಿ ಮಾತನಾಡಬೇಕು ಎಂದು ಅವರು ಒತ್ತಾಯಿಸಿದರು.
ನಮ್ಮ ಎಲ್ಲಾ ಸ್ವಾತಂತ್ರ್ಯ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಅವಲಂಬಿತವಾಗಿದೆ. ಇದು ಪ್ರಜಾಪ್ರಭುತ್ವ ಮತ್ತು ನ್ಯಾಯದ ಅಡಿಪಾಯ. ಬೆದರಿಕೆಗಳು ಮತ್ತು ದಾಳಿಗಳನ್ನು ನಿಲ್ಲಿಸಿ. ಅವರು ಮಾಡುವ ಕೆಲಸಗಳಿಗಾಗಿ ಬಂಧಿಸಿ ಜೈಲಿಗೆ ಹಾಕುವುದನ್ನು ನಿಲ್ಲಿಸಿ. ಸುಳ್ಳು ಮತ್ತು ತಪ್ಪು ಮಾಹಿತಿಗಳನ್ನು ತಡೆಯಿರಿ. ಸತ್ಯ ಹೇಳುವವರನ್ನು ಗುರಿಯಾಗಿಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಗುಟೆರಸ್ ಅವರು ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿ ಹಾಲ್‌ನಲ್ಲಿ ಯುನೆಸ್ಕೋ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದ ವರ್ಷ 67 ಮಾಧ್ಯಮ ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿದೆ. ಅದಕ್ಕಿಂತಲೂ ಹಿಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚಾಗಿದೆ. ಮಹಿಳಾ ಪತ್ರಕರ್ತೆಯರು ಪರೋಕ್ಷವಾಗಿ ಬೆದರಿಕೆ, ಹಿಂಸೆಯನ್ನು ಅನುಭವಿಸಿದ್ದಾರೆ. ನಾಲ್ವರಲ್ಲಿ ಒಬ್ಬರು ದೈಹಿಕ ಬೆದರಿಕೆಗೆ ತುತ್ತಾಗಿದ್ದಾರೆ. ಇದು ಕಳವಳಕಾರಿ ಸಂಗತಿ ಎಂದು ಹೇಳಿದರು.
ಪತ್ರಕರ್ತರು ಮತ್ತು ಮಾಧ್ಯಮ ಮಿತ್ರರು ಮಾಡುವ ಪ್ರಮುಖ ಕೆಲಸದ ವೇಲೆ ನೇರವಾಗಿ ಅಥವಾ ಪರೋಕ್ಷವಾಗಿ ವಿರೋಧಕ್ಕೆ ಒಳಗಾಗುತ್ತಾರೆ. ಅವರಿಗೆ ನಿತ್ಯ ಕಿರುಕುಳ, ಬೆದರಿಕೆ, ಬಂಧನ ಮತ್ತು ಜೈಲಿಗೆ ಹಾಕುವ ಕೆಲಸ ನಡೆಯುತ್ತಲೇ ಇದೆ. ಇದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗುತ್ತದೆ ಎಂದು ಗುಟೆರಸ್ ಅಭಿಪ್ರಾಯಪಟ್ಟರು.