ವಾಷಿಂಗ್ಟನ್ (ಅಮೆರಿಕ): ಭಾರತದ ಖ್ಯಾತ ಆಧ್ಯಾತ್ಮ ಗುರು, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ನೇತೃತ್ವದಲ್ಲಿ ಅಮೆರಿಕದ ವಾಷಿಂಗ್ಟನ್ನಲ್ಲಿ 4ನೇ ವಿಶ್ವ ಸಂಸ್ಕೃತಿ ಉತ್ಸವದ ಮೂರನೇ ದಿನದ ಕಾರ್ಯಕ್ರಮಗಳು ಅದ್ಧೂರಿಯಾಗಿ ನೆರವೇರಿದವು. ರವಿಶಂಕರ್ ಗುರೂಜಿಯವರ ನೇತೃತ್ವದಲ್ಲಿ ಇಲ್ಲಿನ ಲಿಂಕನ್ ಸೆಂಟರ್ನಲ್ಲಿ ನಡೆದ ಯೋಗ ಮತ್ತು ಧ್ಯಾನ ಕಾರ್ಯಕ್ರಮದಲ್ಲಿ ಪ್ರಪಂಚದೆಲ್ಲೆಡೆಯಿಂದ ಸಾವಿರಾರು ಜನರು ಭಾಗವಹಿಸಿದ್ದರು.
ವಿಶ್ವ ಸಂಸ್ಕೃತಿ ಉತ್ಸವದಲ್ಲಿ ವಿವಿಧ 180 ದೇಶಗಳು ಭಾಗವಹಿಸಿದ್ದವು. ಒಟ್ಟು ವಿವಿಧ ರಾಷ್ಟ್ರಗಳ 17 ಸಾವಿರ ಕಲಾವಿದರು ತಮ್ಮ ಕಲಾ ಪ್ರದರ್ಶನ ನೆರವೇರಿಸಿದರು. ಆಕರ್ಷಕ ಪ್ರದರ್ಶನಗಳು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡಿತ್ತು. ವೈಭವೋಪೇತವಾಗಿ ನಡೆದ ಕಾರ್ಯಕ್ರಮದಲ್ಲಿ ಮಾರಿಷಸ್ ಅಧ್ಯಕ್ಷ ಪೃಥ್ವಿರಾಜ್ ಸಿಂಗ್ ರೂಪನ್, ಯುಎಸ್ ಸರ್ಜನ್ ಜನರಲ್ ವಿವೇಕ್ ಮೂರ್ತಿ, ಟುನೀಶಿಯಾದ ಮಾಜಿ ಅಧ್ಯಕ್ಷ ಮೊನ್ಸೆಫ್ ಮಾರ್ಜೌಕಿ ಸೇರಿ ವಿವಿಧ ದೇಶಗಳ ಗಣ್ಯಾತಿಗಣ್ಯರು ಭಾಗವಹಿಸಿದ್ದರು. ವಿವಿಧ ದೇಶಗಳ ಕಲಾವಿದರ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ಪ್ರೇಕ್ಷಕರ ಕೇಂದ್ರ ಬಿಂದುವಾಗಿತ್ತು. ಅಮೆರಿಕನ್ ಆರ್ಮಿ ಬ್ಯಾಂಡ್, ಚೀನಾದ ಸಾಂಸ್ಕೃತಿಕ ನೃತ್ಯ , ಗಾರ್ಬಾ ನೃತ್ಯಗಳು, ಪಾಶ್ಚಾತ್ಯ ನೃತ್ಯಗಳು ಹಾಗೂ ಉಕ್ರೇನಿಯನ್ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಗಳು ಕಣ್ಮನ ಸೆಳೆದವು.
ಬಳಿಕ ಸಾಂಸ್ಕೃತಿಕ ಉತ್ಸವ ಉದ್ದೇಶಿಸಿ ಮಾತನಾಡಿದ ರವಿಶಂಕರ್ ಗುರೂಜಿ, ಧ್ಯಾನದ ಮಹತ್ವವನ್ನು ವಿವರಿಸಿದರು. ಶಬ್ದವು ಸಂಗೀತವನ್ನು ವಿಸ್ತರಿಸುತ್ತದೆ. ಧ್ಯಾನವು ಮನಸ್ಸನ್ನು ವಿಸ್ತರಿಸುತ್ತದೆ. ನಮ್ಮ ಆಚರಣೆಗಳಿಂದ ಜೀವನವು ವಿಸ್ತಾರಗೊಳ್ಳುತ್ತದೆ ಎಂದು ಹೇಳಿದರು.
ಎಲ್ಲಾ ರೀತಿಯ ಶಬ್ದಗಳು ನಮ್ಮೊಳಗೆ ನಿಶ್ಶಬ್ಧವನ್ನು ಸೃಷ್ಟಿಸುತ್ತವೆ. ಮೌನವು ಸೃಜನಶೀಲತೆಯ ತಾಯಿ. ಅದು ಪ್ರೀತಿ ಮತ್ತು ಕರುಣೆಯಿಂದ ತುಂಬಿದ ಮನೆಯಿದ್ದಂತೆ. ನಮ್ಮೊಳಗಿನ ನಿಜವಾದ ಮೌನವು ನಮ್ಮಲ್ಲಿ ಸಂತೋಷ, ಪ್ರೀತಿಯನ್ನು ಅರಳಿಸುತ್ತದೆ. ಆದ್ದರಿಂದ ನಾವು ಕೆಲವು ನಿಮಿಷಗಳ ಧ್ಯಾನ ಮಾಡೋಣ. ಧ್ಯಾನವು ಪ್ರಯತ್ನರಹಿತವಾಗಿದೆ. ಧ್ಯಾನ ಮಾಡಲು ಯಾವುದೇ ಪ್ರಯತ್ನದ ಅಗತ್ಯ ಇಲ್ಲ ಎಂದು ಗುರೂಜಿ ಹೇಳಿದರು.
ಮಾನವ ಜೀವನ ಚಿಕ್ಕದು, ನಾವೆಲ್ಲರೂ ಒಂದೇ ಕುಟುಂಬ: ನಮ್ಮಲ್ಲಿ ಮಾನವೀಯತೆಯನ್ನು ಅಳವಡಿಸಿಕೊಳ್ಳೋಣ. ಸಮಾಜದಲ್ಲಿ ಬಹಳಷ್ಟು ಒಳ್ಳೆಯ ಸಂಗತಿಗಳಿವೆ. ಅಲ್ಲದೆ ಹಲವರಿಗೆ ಒಳ್ಳೆಯದು ಮಾಡಬೇಕೆಂಬ ಹಂಬಲ ಇದೆ. ಒಳ್ಳೆಯತನದಲ್ಲಿ ನಂಬಿಕೆಯನ್ನು ಕಾಣೋಣ. ಇಂದಿನ ಮತ್ತು ಮುಂದಿನ ಪೀಳಿಗೆಗೆ ಉತ್ತಮ ಜಗತ್ತನ್ನು ಒದಗಿಸೋಣ. ಸಮಾಜದಲ್ಲಿ ಸಂತೋಷವನ್ನು ತರಲು ಒಟ್ಟಾಗಿ ಕೆಲಸ ಮಾಡೋಣ. ಈ ಮೂಲಕ ಅನೇಕ ಮುಖದಲ್ಲಿ ನಗುವನ್ನು ಮೂಡಿಸೋಣ. ನಾವೆಲ್ಲರೂ ಒಂದೇ. ಪ್ರಪಂಚವು ಮಾನವೀಯತೆ ಹೊಂದಿರುವ ಒಂದು ಕುಟುಂಬ. ಈ ಜೀವನವನ್ನು ಆದಷ್ಟು ಆನಂದಿಸೋಣ ಎಂದು ಗುರೂಜಿ ಕರೆ ನೀಡಿದರು.
ವಿಶ್ವ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತುಂಬಾ ಸಂತೋಷವಾಯಿತು. ಒಂದು ಉದ್ದೇಶಕ್ಕಾಗಿ , ಹಲವು ದೇಶಗಳ ಜನರನ್ನು ಒಂದೆಡೆ ಒಗ್ಗೂಡಿಸಿದ್ದಕ್ಕೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯನ್ನು ನಾನು ಅಭಿನಂದಿಸುತ್ತೇನೆ. ಇದು ಮಾನವ ಏಕತೆಯ ವಿಭಿನ್ನ ಉತ್ಸವ. ಈ ಉತ್ಸವ ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಭಾಗಿಯಾದ ಸರ್ವಧರ್ಮ ಸಮ್ಮೇಳನವನ್ನು ನೆನಪಿಸುವಂತಿದೆ ಎಂದು ಹೇಳಿದರು.
ಇದನ್ನೂ ಓದಿ :ಅಮೆರಿಕದಲ್ಲಿ ಸಾಂಸ್ಕೃತಿಕ ಉತ್ಸವದ ವೈಭವ: ರವಿಶಂಕರ್ ಗುರೂಜಿ, ವಿದೇಶಾಂಗ ಸಚಿವ ಜೈಶಂಕರ್ ಭಾಗಿ