ವಾಷಿಂಗ್ಟನ್ (ಅಮೆರಿಕ) :ಮಾಸ್ಟರ್‌ಕಾರ್ಡ್ ಮಾಜಿ ಸಿಇಒ ಹಾಗೂ ಭಾರತೀಯ ಅಜಯ್ ಬಂಗಾ ಅವರ ಹೆಸರನ್ನು ವಿಶ್ವಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಶಿಫಾರಸು ಮಾಡಿದ್ದಾರೆ. ಭಾರತೀಯ ಮೂಲದ ಅಧಿಕಾರಿ ವಿಶ್ವಬ್ಯಾಂಕ್ ಅಧ್ಯಕ್ಷ ಪಾತ್ರಕ್ಕೆ ನಾಮ ನಿರ್ದೇಶನಗೊಂಡಿದ್ದು ಅಜಯ್ ಬಂಗಾ ಅವರನ್ನು ಯುಎಸ್ - ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್ನರ್ಶಿಪ್ ಫೋರಮ್ (ಯುಎಸ್ಐಎಸ್ಪಿಎಫ್) ಅಭಿನಂದಿಸಿದೆ.
ಅಲ್ಲದೇ USISPF ನಾಮನಿರ್ದೇಶಿತ ಅಜಯ್ ಬಂಗಾ ಅಮೆರಿಕ - ಭಾರತದ ಸಂಬಂಧಗಳನ್ನು ಬಲಪಡಿಸುವಲ್ಲಿ ಸಾಕಷ್ಟು ಶ್ರಮವಹಿಸಿದ್ದಾರೆ ಎಂದು ಗುಣಗಾನ ಮಾಡಿದೆ. ಇನ್ನು ಬಂಗಾ ಅವರ ನಾಮ ನಿರ್ದೇಶನದ ಕುರಿತು ಮಾತನಾಡಿರುವ USISPF ಅಧ್ಯಕ್ಷ ಮತ್ತು CEO ಮುಖೇಶ್ ಅಘಿ, ಅಜಯ್ ಅಮೆರಿಕ- ಭಾರತದ ಸಂಬಂಧಗಳನ್ನು ಬಲಪಡಿಸುವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಹೇಳಿದ್ದಾರೆ.
USISPF ಸಂಸ್ಥಾಪಕ ಮಂಡಳಿಯ ಸದಸ್ಯರಾಗಿ ಅಜಯ್ ಪ್ರಮುಖ ಪಾತ್ರ ವಹಿಸಿದ್ದು, ಕಳೆದ ಐದು ವರ್ಷಗಳಲ್ಲಿ ನಮ್ಮ ಯಶಸ್ಸಿನಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದಾರೆ. ಸಿಟಿಗ್ರೂಪ್, ಮಾಸ್ಟರ್‌ಕಾರ್ಡ್, ಜನರಲ್ ಅಟ್ಲಾಂಟಿಕ್ ಮತ್ತು ಯುಎಸ್‌ಐಎಸ್‌ಪಿಎಫ್‌ನೊಂದಿಗೆ ಬಂಗಾ ಅವರು, ಹವಾಮಾನ, ಜಲಸಂಪನ್ಮೂಲ, ಆಹಾರ ಭದ್ರತೆ ಮತ್ತು ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಶ್ರಮಿಸಿದ್ದಾರೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸಂಪನ್ಮೂಲಗಳನ್ನು ಸಜ್ಜುಗೊಳಿಸುವಲ್ಲಿ ಉತ್ತಮವಾದ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಇದು ಭಾರತೀಯ-ಅಮೆರಿಕನ್ ಡಯಾಸ್ಪೊರಾ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಹೊಸ ಇನ್ನಿಂಗ್ಸ್‌ಗಾಗಿ ನಾನು ಅಜಯ್‌ಗೆ ಶುಭ ಹಾರೈಸುತ್ತೇನೆ" ಎಂದು ಮುಖೇಶ್ ಅಘಿ ತಿಳಿಸಿದ್ದಾರೆ.
ಬಂಗಾ ಗುಣಗಾನ ಮಾಡಿದ ಬೈಡನ್:ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರಸ್ತುತ ಜನಲರ್ ಅಟ್ಲಾಂಟಿಕ್‌ನ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಮಾಸ್ಟರ್‌ಕಾರ್ಡ್ ಮಾಜಿ ಸಿಇಒ ಅಜಯ್ ಬಂಗಾ ಅವರನ್ನು ವಿಶ್ವ ಬ್ಯಾಂಕ್ ಅನ್ನು ಮುನ್ನಡೆಸಲು ನಾಮನಿರ್ದೇಶನ ಮಾಡಿದರು. ಇತಿಹಾಸದ ಈ ನಿರ್ಣಾಯಕ ಕ್ಷಣದಲ್ಲಿ ವಿಶ್ವ ಬ್ಯಾಂಕ್ ಅನ್ನು ಯಶಸ್ಸಿನ ಹಾದಿಯಲ್ಲಿ ಕೊಂಡೊಯ್ಯಲು ಅಜಯ್ ಅನನ್ಯವಾಗಿ ಸಜ್ಜುಗೊಂಡಿದ್ದಾರೆ. ಬಂಗಾ ಮೂರು ದಶಕಗಳಿಗೂ ಹೆಚ್ಚು ಕಾಲ ಜಾಗತಿಕ ಕಂಪನಿಗಳು ಉದ್ಯೋಗಗಳನ್ನು ಸೃಷ್ಟಿಸುವಲ್ಲಿ, ಅಭಿವೃದ್ಧಿಶೀಲ ಆರ್ಥಿಕತೆಗಳಿಗೆ ಹೂಡಿಕೆಯನ್ನು ತರುವಲ್ಲಿ ಮತ್ತು ಮೂಲ ಬದಲಾವಣೆಯ ಅವಧಿಗಳ ಮೂಲಕ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡುವಲ್ಲಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಬಂಗಾರವರು ಜನರು ಮತ್ತು ವ್ಯವಸ್ಥೆಗಳನ್ನು ನಿರ್ವಹಿಸುವಲ್ಲಿ ತಮ್ಮ ಕಾರ್ಯಕ್ಷಮತೆಯಿಂದ ದಾಖಲೆಯನ್ನು ಹೊಂದಿದ್ದು, ವಿಶ್ವದಾದ್ಯಂತದ ಜಾಗತಿಕ ನಾಯಕರೊಂದಿಗೆ ಪಾಲುದಾರಿಕೆ ಹೊಂದಿದ್ದಾರೆ ಎಂದು ಬೈಡನ್ ಹೇಳಿದ್ದಾರೆ.