ರೇಕ್‌ಜಾವಿಕ್ (ಐಸ್‌ಲ್ಯಾಂಡ್): ಅಸಮಾನ ವೇತನ ಮತ್ತು ಲಿಂಗ ಆಧಾರಿತ ಹಿಂಸಾಚಾರವನ್ನು ಕೊನೆಗೊಳಿಸುವಂತೆ ಒತ್ತಾಯಿಸಿ ಐಸ್ಲ್ಯಾಂಡ್ನ ಪ್ರಧಾನಿ ಹಾಗೂ ದೇಶದ ಮಹಿಳೆಯರು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನ ಮಂತ್ರಿ ಕ್ಯಾಟ್ರಿನ್ ಜಾಕೋಬ್ಸ್‌ಡೋಟ್ಟಿರ್ ಅವರು 'ಮಹಿಳಾ ದಿನದ ರಜೆ' ಭಾಗವಾಗಿ ಮನೆಯಲ್ಲಿಯೇ ಇರುವುದಾಗಿ ಹೇಳಿದ್ದಾರೆ ಮತ್ತು ಅವರ ಕ್ಯಾಬಿನೆಟ್‌ನಲ್ಲಿರುವ ಇತರ ಮಹಿಳೆಯರು ಇದೇ ರೀತಿ ಮಾಡುತ್ತಾರೆ" ಎಂದು ನಿರೀಕ್ಷಿಸಿದ್ದಾರೆ.
"ನಾವು ಇನ್ನೂ ಪೂರ್ಣ ಲಿಂಗ ಸಮಾನತೆಯ ಗುರಿಗಳನ್ನು ತಲುಪಿಲ್ಲ. ಲಿಂಗ ಆಧಾರಿತ ವೇತನ ಅಂತರವನ್ನು ಹೊಂದಿದ್ದೇವೆ. 2023ರ ಈ ವೇಳೆಯಲ್ಲೂ ಇಂತಹ ಪದ್ಧತಿ ಸ್ವೀಕಾರಾರ್ಹವಲ್ಲ. ಇದನ್ನು ತೊಡೆದು ಹಾಕುವುದು ನನ್ನ ಸರ್ಕಾರದ ಆದ್ಯತೆ" ಎಂದು ಅವರು ಸ್ಥಳೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಒಂದು ದಿನದ ಮುಷ್ಕರದ ಸಮಯದಲ್ಲಿ ಮನೆಕೆಲಸ ಸೇರಿದಂತೆ ಪಾವತಿಸಿದ ಮತ್ತು ಪಾವತಿಸದ ಕೆಲಸವನ್ನು ಮಾಡಬೇಡಿ ಎಂದು ಸಂಘಟಕರು ಮಹಿಳೆಯರಿಗೆ ಮತ್ತು ಬೈನರಿಗಳಿಗೆ ಕರೆ ನೀಡಿದ್ದಾರೆ. ಮಹಿಳಾ ಉದ್ಯೋಗಿಗಳೇ ಹೆಚ್ಚಾಗಿರುವ ಶಾಲೆಗಳು ಮತ್ತು ಆಸ್ಪತ್ರೆಗಳ ಮೇಲೆ ಮಹಿಳೆಯರ ವಾಕ್‌ಔಟ್ ಹೆಚ್ಚು ಪರಿಣಾಮ ಬಿಳಲಿದೆ ಎಂದು ಹೇಳಿದ್ದಾರೆ. ಮತ್ತೊಂದೆಡೆ, ಈ ಹಿನ್ನೆಲೆಯಲ್ಲಿ ದಿನದ ದೂರದರ್ಶನ ಮತ್ತು ರೇಡಿಯೋ ಪ್ರಸಾರವನ್ನು ಕಡಿಮೆ ಮಾಡಲಾಗುತ್ತಿದೆ ಎಂದು ರಾಷ್ಟ್ರೀಯ ಪ್ರಸಾರಕ RUV ಹೇಳಿದೆ.
ಅಕ್ಟೋಬರ್ 24, 1975 ರಂದು ಐಸ್‌ಲ್ಯಾಂಡ್‌ನಲ್ಲಿ ಮೊದಲ ಬಾರಿಗೆ ಮಹಿಳೆಯರು ಇಂತಹ ಮುಷ್ಕರ ನಡೆಸಿದ್ದರು ಅದರ ಬಳಿಕ ಇಂದು ನಡೆದ ಮಹಿಳೆಯ ವಾಕ್‌ಔಟ್ ಅತಿದೊಡ್ಡ ಮುಷ್ಕರವಾಗಿದೆ. ಶೇ.90 ರಷ್ಟು ಮಹಿಳೆಯರು ಇಂದು ಕೆಲಸ ಮಾಡಲು, ಮನೆ ಸ್ವಚ್ಛಗೊಳಿಸಲು ಮತ್ತು ಮಕ್ಕಳನ್ನು ನೋಡಿಕೊಳ್ಳುವುದನ್ನು ಬಹಿಷ್ಕರಿಸಿದ್ದಾರೆ. ಈ ಮೂಲಕ ಮಹಿಳೆಯರು ಕೆಲಸದ ಸ್ಥಳದಲ್ಲಿನ ತಾರತಮ್ಯದ ಬಗ್ಗೆ ಆಕ್ರೋಶವನ್ನು ಹೊರಹಾಕಿದ್ದಾರೆ. ಐಸ್‌ಲ್ಯಾಂಡ್ ಲಿಂಗವನ್ನು ಪರಿಗಣಿಸದೆ ಸಮಾನ ಹಕ್ಕುಗಳನ್ನು ಖಾತರಿಪಡಿಸುವ ಕಾನೂನನ್ನು ಅಂಗೀಕರಿಸಿದೆ.
ಈ ಪ್ರತಿಭಟನೆಯು ಪೋಲೆಂಡ್ ಸೇರಿದಂತೆ ಇತರ ದೇಶಗಳಲ್ಲಿ ಇದೇ ರೀತಿಯ ಪ್ರತಿಭಟನೆಗಳಿಗೆ ಸ್ಫೂರ್ತಿ ನೀಡಿದೆ. ಅಲ್ಲಿ ಉದ್ದೇಶಿತ ಗರ್ಭಪಾತ ನಿಷೇಧ ವಿರೋಧಿಸಿ 2016 ರಲ್ಲಿ ಮಹಿಳೆಯರು ಉದ್ಯೋಗ ಮತ್ತು ತರಗತಿಗಳನ್ನು ಬಹಿಷ್ಕರಿಸಿದ್ದರು. ಆರ್ಕ್ಟಿಕ್ ವೃತ್ತದ ಕೆಳಗೆ ಸುಮಾರು 3,40,000 ಜನಸಂಖ್ಯೆಯನ್ನು ಹೊಂದಿರುವ ದ್ವೀಪರಾಷ್ಟ್ರವಾದ ಐಸ್‌ಲ್ಯಾಂಡ್, ವೇತನ, ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಇತರ ಅಂಶಗಳನ್ನು ಅಳೆಯುವ ವಿಶ್ವ ಆರ್ಥಿಕ ವೇದಿಕೆಯಿಂದ ಸತತ 14 ವರ್ಷಗಳ ಕಾಲ ವಿಶ್ವದ ಅತ್ಯಂತ ಲಿಂಗ ಸಮಾನತೆಯ ದೇಶವೆಂಬ ಶ್ರೇಯಾಂಕ ಪಡೆದಿದೆ. ಆದರೆ ವಿಶ್ವದ ಯಾವುದೇ ದೇಶವು ಸಂಪೂರ್ಣ ಲಿಂಗ ಸಮಾನತೆಯನ್ನು ಸಾಧಿಸಿಲ್ಲ. ಐಸ್‌ಲ್ಯಾಂಡ್‌ನಲ್ಲಿ ಈಗಲೂ ಪುರುಷರ ಮತ್ತು ಮಹಿಳೆಯರ ವೇತನದಲ್ಲಿ ಅಂತರವಿದೆ.
ಇದನ್ನೂ ಓದಿ:ಇಸ್ರೇಲ್ ಮತ್ತು ಪ್ಯಾಲೆಸ್ಟೆನ್ ಹಮಾಸ್ ಸಂಘರ್ಷ: ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್