ಪ್ರಯತ್ನದಲ್ಲಿ ಫಲ ಇದೆ ಎಂಬ ಮಾತಿದೆ. ಅಂದರೆ ಸತತ ಪ್ರಯತ್ನ ಮಾಡಿದಲ್ಲಿ ಮಾತ್ರ ಜೀವನದಲ್ಲಿ ಯಶಸ್ಸು ಕಾಣಬಹುದಾಗಿದೆ. ಈ ಮಾತಿಗೆ ಪೂರಕ ಎಂಬಂತೆ ಮಹಿಳೆಯೊಬ್ಬರು ಡ್ರೈವಿಂಗ್ ಲೈಸೆನ್ಸ್‌ಗಾಗಿ ಬರೋಬ್ಬರಿ 960 ಬಾರಿ ಪರೀಕ್ಷೆ ನೀಡಿ ವಾಹನ ಚಾಲನೆ ಪರವಾನಗಿ ಪಡೆದುಕೊಂಡಿದ್ದಾರೆ.
ಹೌದು, ಇದು ಅಚ್ಚರಿಯಾದರೂ ಸತ್ಯ ಘಟನೆ. ದಕ್ಷಿಣ ಕೊರಿಯಾದ 69ರ ಪ್ರಾಯದ ಚಾ ಸಾ-ಸೂನ್ ಎಂಬ ವೃದ್ಧೆ ಏಪ್ರಿಲ್ 2005ರಲ್ಲಿ ಮೊದಲ ಬಾರಿಗೆ ಡ್ರೈವಿಂಗ್ ಲೈಸೆನ್ಸ್ನ ಲಿಖಿತ ಪರೀಕ್ಷೆಯನ್ನು ಬರೆದಿದ್ದರು. ಆದರೇ ಸೂನ್ ಅವರು ಮೊದಲ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು. ಹೇಗಾದರು ಮಾಡಿ ಡ್ರೈವಿಂಗ್ ಲೈಸೆನ್ಸ್ ಪಡೆದೇ ತೀರಬೇಕು ಎಂದು ನಿರ್ಧರಿಸಿದ ಅವರು ವಾರಕ್ಕೆ ಐದು ದಿನ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ ಪರೀಕ್ಷೆ ಬರೆಯಲು ಆರಂಭಿಸಿದರು. ಮೂರು ವರ್ಷಗಳ ಕಾಲ ವಾರಕ್ಕೆ ಐದು ದಿನ ನಿಯಮಿತವಾಗಿ ಪರೀಕ್ಷೆಗೆ ಹಾಜರಾಗಿದ್ದರು. ಮೂರು ವರ್ಷಗಳಲ್ಲಿ 780 ಪ್ರಯತ್ನಗಳನ್ನು ಮಾಡಿದ ಅವರಿಗೆ ಎಲ್ಲದರಲ್ಲೂ ಫಲಿತಾಂಶ ಫೇಲ್ ಎಂದೇ ಇರುತಿತ್ತು.
ಕೊನೆಗೂ ಸಿಕ್ಕಿತು ಲೈಸೆನ್ಸ್.. ಇವರ ಸ್ಥಾನದಲ್ಲಿ ಬೇರೆ ಯಾರಾದರೂ ಇದ್ದಿದ್ದರೇ ಬಹುಶಃ ಡ್ರೈವಿಂಗ್ ಲೈಸೆನ್ಸ್ನ ಸಹವಾಸವೇ ಬೇಡಪ್ಪ ಎಂದು ಸುಮ್ಮನಾಗುತ್ತಿದ್ದರು. ಆದರೆ ಸೂನ್ ಮಾತ್ರ ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆ ಬರೆಯುವ ಪ್ರಯತ್ನವನ್ನು ನಿಲ್ಲಿಸಲಿಲ್ಲ. ಮೂರು ವರ್ಷಗಳ ನಂತರ ವಾರಕ್ಕೆ ಎರಡು ಬಾರಿ ಪರೀಕ್ಷೆಗೆ ಹೋಗತೊಡಗಿದರು. ದೀರ್ಘ ಕಾಲದಿಂದ ಪ್ರಯತ್ನಿಸುತ್ತಿದ್ದ ಅವರು ಅಂತಿಮವಾಗಿ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರಾಯೋಗಿಕ ಪರೀಕ್ಷೆಗೆ ಆಯ್ಕೆಯಾದರು. ಪ್ರಾಯೋಗಿಕ ಪರೀಕ್ಷೆಯಲ್ಲೂ ಹತ್ತು ಬಾರಿ ಪ್ರಯತ್ನಿಸಿ ಯಶಸ್ವಿಯಾದರು. ಒಟ್ಟು 960 ಪ್ರಯತ್ನಗಳ ನಂತರ ಚಾ ಸಾ-ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದಾರೆ.