ಜೆರುಸಲೇಂ:ಯುದ್ಧಪೀಡಿತ ಗಾಜಾಪಟ್ಟಿಯಲ್ಲಿ ಸಿಲುಕಿದ್ದ ಕಾಶ್ಮೀರಿ ಮಹಿಳೆ ಮತ್ತು ಆಕೆಯ ಮಗಳನ್ನು ಭಾರತೀಯ ಸಂಸ್ಥೆಗಳು ರಕ್ಷಣೆ ಮಾಡಿವೆ. ರಕ್ಷಣೆ ಕೋರಿದ್ದ ಮಹಿಳೆಯನ್ನು ಇಸ್ರೇಲ್ ನೆರವಿನಿಂದ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಈಜಿಪ್ಟ್ಗೆ ಕರೆದೊಯ್ಯಲಾಗಿದೆ ಎಂದು ಆಕೆಯ ಪತಿ ಮಾಹಿತಿ ನೀಡಿದ್ದಾರೆ.
ಲುಬ್ನಾ ನಜೀರ್ ಶಾಬೂ ಮತ್ತು ಆಕೆಯ ಮಗಳು ಕರೀಮಾ ಸೋಮವಾರ ಸಂಜೆ ಈಜಿಪ್ಟ್ ಮತ್ತು ಗಾಜಾ ನಡುವಿನ ರಫಾ ಗಡಿ ದಾಟಿ ಬಂದಿದ್ದಾರೆ. ಸದ್ಯ ಅವರು ಈಜಿಪ್ಟ್ನ ಅಲ್ ಅರಿಶ್ ನಗರದಲ್ಲಿದ್ದಾರೆ. ಮಂಗಳವಾರ ಅವರು ಕೈರೋಗೆ ತೆರಳಲಿದ್ದಾರೆ ಎಂದು ಲುಬ್ನಾ ಅವರ ಪತಿ ತಿಳಿಸಿದ್ದಾರೆ.
ರಫಾ ಗಡಿ ಮಾತ್ರ ಬಳಕೆ:ಗಾಜಾವನ್ನು ತನ್ನ ನಿಯಂತ್ರಣಕ್ಕೆ ಪಡೆದಿರುವ ಇಸ್ರೇಲ್ ರಫಾ ಗಡಿಯನ್ನು ಮಾತ್ರ ರಕ್ಷಣಾ ಕಾರ್ಯಾಚರಣೆಗಳಿಗೆ ಬಳಸಿಕೊಳ್ಳುತ್ತಿದೆ. ಜೊತೆಗೆ ಮಾನವೀಯ ನೆರವನ್ನೂ ಈ ಗಡಿಯಿಂದಲೇ ಗಾಜಾಕ್ಕೆ ಕಳುಹಿಸಲಾಗುತ್ತದೆ. ಏಕೈಕ ನಿರ್ಗಮನ ಮಾರ್ಗವಾಗಿರುವ ರಫಾ ಕ್ರಾಸಿಂಗ್ನಿಂದ ಮಾತ್ರ ವಿದೇಶಿ ಪ್ರಜೆಗಳು ಮತ್ತು ಗಾಯಾಳುಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ.
ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ಕಾಶ್ಮೀರಿ ಮಹಿಳೆ ಲುಬ್ನಾ ಅವರು, 'ಗಾಜಾ ತೊರೆಯಲು ಭಾರತೀಯ ರಕ್ಷಣಾ ಸಂಸ್ಥೆಗಳಿಗೆ ಅಕ್ಟೋಬರ್ 10 ರಂದು ನೆರವು ಕೋರಿದ್ದೆ. ಅವರು ನನ್ನನ್ನೀಗ ರಕ್ಷಿಸಿ ಈಜಿಪ್ಟ್ಗೆ ಸುರಕ್ಷಿತವಾಗಿ ಕರೆತಂದಿದ್ದಾರೆ. ಇದಕ್ಕೆ ಧನ್ಯವಾದ ಸಲ್ಲಿಸುವೆ' ಎಂದು ಹೇಳಿದ್ದಾರೆ.