ನವದೆಹಲಿ:ನಿನ್ನೆ ರಾತ್ರಿ ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶಾಕಿಂಗ್ ಘಟನೆಯೊಂದು ನಡೆದಿದೆ. ಕಾರ್ಯಕ್ರಮದ ನಿರೂಪಕ ತನ್ನ ಪತ್ನಿಯನ್ನು ಹೀಯಾಳಿಸಿದ ಎಂಬ ಕಾರಣಕ್ಕಾಗಿ ನಟ ವಿಲ್ ಸ್ಮಿತ್ ಕೋಪಗೊಂಡು ವೇದಿಕೆ ಮೇಲೆಯೇ ನಿರೂಪಕನ ಕಪಾಳಕ್ಕೆ ಹೊಡೆದಿದ್ದಾರೆ.
ನಿರೂಪಕ ಕ್ರಿಸ್ ರಾಕ್, ನಟ ವಿಲ್ ಸ್ಮಿತ್ರ ಪತ್ನಿ ಜಡಾ ಪಿಂಕೆಟ್ ಸ್ಮಿತ್ರ ಬೋಳು ತಲೆಯ ಬಗ್ಗೆ ತಮಾಷೆ ಮಾಡಿದ್ದಾರೆ. ಜಡಾ ನೀವು ಬೋಳು ತಲೆಯಲ್ಲಿ ನಟಿಸಿದ ಸಿನಿಮಾ ಜಿಐ ನೋಡಲು ಇಷ್ಟಪಡುತ್ತೇನೆ ಎಂದಾಗ ಇಡೀ ಸಭಾಂಗಣ ಗೊಳ್ಳೆಂದು ನಕ್ಕಿದೆ.
ಕ್ರಿಸ್ ರಾಕ್ರ ಈ ತಮಾಷೆಯಿಂದ ಕೋಪಗೊಂಡ ವಿಲ್ ಸ್ಮಿತ್ ವೇದಿಕೆಯ ತೆರಳಿ ಕ್ರಿಸ್ ರಾಕ್ ಕಪಾಳಕ್ಕೆ ಹೊಡೆದಿದ್ದಾರೆ. ಬಳಿಕ 'ನನ್ನ ಹೆಂಡತಿಯ ಹೆಸರನ್ನು ನಿಮ್ಮ ಬಾಯಲ್ಲಿ ಹೇಳಬೇಡಿ' ಎಂದು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಕೆಲಹೊತ್ತು ಕಾರ್ಯಕ್ರಮದಲ್ಲಿ ಗಲಿಬಿಲಿ ಉಂಟಾಗಿದೆ.
ಇನ್ನು ವಿಲ್ ಸ್ಮಿತ್ರ ಪತ್ನಿ ಜಡಾ ಪಿಂಕೆಟ್ ಅಲೋಪೆಸಿಯಾ ಎಂಬ ಕಾಯಿಲೆಗೆ ತುತ್ತಾಗಿದ್ದು, ಈ ಕಾರಣಕ್ಕಾಗಿ ಅವರು ತಮ್ಮ ಕೂದಲನ್ನು ಕತ್ತರಿಸಿದ್ದಾರೆ. ಇದನ್ನು ಅರಿಯದ ನಿರೂಪಕ ಕ್ರಿಸ್ ರಾಕ್ ಸಿನಿಮಾಕ್ಕಾಗಿ ಕೂದಲು ಕತ್ತರಿಸಿಕೊಂಡಿದ್ದಾರೆ ಎಂದು ತಮಾಷೆ ಮಾಡಿ ಪೆಟ್ಟು ತಿಂದಿದ್ದಾರೆ. ಕ್ರಿಸ್ ರಾಕ್ಗೆ ವಿಲ್ ಸ್ಮಿತ್ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೇ ಇದು ಕಾರ್ಯಕ್ರಮದ ಭಾಗವಾಗಿ ಈ ಸ್ಕ್ರಿಪ್ಟ್ ಮಾಡಲಾಗಿದೆಯಾ ಎಂಬ ಅನುಮಾನವನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.
ವಿಲ್ ಸ್ಮಿತ್ಗೆ ಅತ್ಯುತ್ತಮ ನಟ ಪ್ರಶಸ್ತಿ:ಆಸ್ಕರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ನಟ ವಿಲ್ ಸ್ಮಿತ್ ತಮ್ಮ 'ಕಿಂಗ್ ರಿಚರ್ಡ್' ಚಿತ್ರದಲ್ಲಿನ ನಟನೆಗಾಗಿ 'ಅತ್ಯುತ್ತಮ ನಟ' ಪ್ರಶಸ್ತಿಯನ್ನು ಪಡೆದಿದ್ದಾರೆ. ಕಿಂಗ್ ರಿಚರ್ಡ್ ಸಿನಿಮಾ ಅವರ ತಂದೆ ರಿಚರ್ಡ್ ವಿಲಿಯಮ್ಸ್, ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಮತ್ತು ವೀನಸ್ ವಿಲಿಯಮ್ಸ್ ಅವರನ್ನೊಳಗೊಂಡ ಕಥೆಯಾಗಿದೆ. ಇದರಲ್ಲಿ ರಿಚರ್ಡ್ ವಿಲಿಯಮ್ಸನ್ ಅವರು ಮಕ್ಕಳನ್ನು ಅತ್ಯುತ್ತಮ ಟೆನಿಸ್ ಆಟಗಾರರನ್ನಾಗಿ ಮಾಡಲು ಏನೆಲ್ಲಾ ಕಷ್ಟಪಟ್ಟರು ಎಂಬುವನ್ನು ತೋರಿಸಲಾಗಿದೆ. ಸಿನಿಮಾದಲ್ಲಿನ ವಿಲ್ ಸ್ಮಿತ್ರ ನಟನೆಗೆ ವಿಶ್ವಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.
ಓದಿ:ರಷ್ಯಾ - ಉಕ್ರೇನ್ ಯುದ್ಧ: ಟರ್ಕಿಯಲ್ಲಿ ಮುಂದಿನ ಸುತ್ತಿನ ಶಾಂತಿ ಮಾತುಕತೆ