ಟೆಕ್ಸಾಸ್:ಪೋರ್ಚುಗಲ್, ಸ್ಪೇನ್ ಸೇರಿದಂತೆ ಯುರೋಪ್ ರಾಷ್ಟ್ರಗಳಲ್ಲಿ ಕಾಡ್ಗಿಚ್ಚು, ಬಿಸಿಗಾಳಿಯು ನಿಸರ್ಗ ಮತ್ತು ಪ್ರಾಣ ಹಾನಿ ಉಂಟು ಮಾಡುತ್ತಿದೆ. ಇದೀಗ ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲೂ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಇದರಿಂದ ಅಪಾರ ಪ್ರಮಾಣದ ಕಾಡು, ಪ್ರಾಣಿ ಸಂಕುಲ ನಾಶವಾಗಿದೆ.
ಶುಷ್ಕ ವಾತಾವರಣ ಮತ್ತು ಬಲವಾದ ಬಿಸಿ ಗಾಳಿಯಿಂದಾಗಿ ಕಾಡ್ಗಿಚ್ಚು ಉಂಟಾಗುತ್ತಿದೆ ಎಂದು ಅಲ್ಲಿನ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ 6 ಮನೆಗಳು ಬೆಂಕಿಗೆ ಆಹುತಿಯಾಗಿವೆ. ಸುಮಾರು 300 ಮನೆಗಳನ್ನು ಸ್ಥಳಾಂತರ ಮಾಡಲಾಗಿದೆ. 4 ಸಾವಿರ ಎಕರೆ ಅರಣ್ಯ ಪ್ರದೇಶ ಅಗ್ನಿಜ್ವಾಲೆಗೆ ಬೆಂದಿದೆ. ಇದು ಅಪಾರ ಪ್ರಮಾಣದ ಅರಣ್ಯ ಸಂಕುಲದ ನಾಶಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟೆಕ್ಸಾಸ್ನ ಫೋರ್ಟ್ವರ್ತ್ ಪಶ್ಚಿಮದ 113 ಕಿಲೋಮೀಟರ್ ದೂರದಲ್ಲಿರುವ ಪೊಸ್ಸಮ್ ಕಿಂಗ್‌ಡಮ್ ಸರೋವರದ ಭಾಗದ ಅರಣ್ಯ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಇದು ದಿನೇ ದಿನೇ ವ್ಯಾಪಿಸುತ್ತಿದೆ. ಅಗ್ನಿಶಾಮಕ ಸಿಬ್ಬಂದಿ ಸರೋವರದ ದಡದಲ್ಲಿರುವ ಮನೆಗಳನ್ನು ತೆರವು ಮಾಡಿಸುತ್ತಿದ್ದಾರೆ.