ನವದೆಹಲಿ: ಜೈಲಿನಲ್ಲಿರುವ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಅವರ ಪತ್ನಿ ಮುಶಾಲ್ ಹುಸೇನ್ ಮುಲೀಕ್ ಈಗ ಪಾಕಿಸ್ತಾನದ ಹಂಗಾಮಿ ಸರ್ಕಾರದ ಭಾಗವಾಗಿದ್ದಾರೆ. ಅವರು ಹಂಗಾಮಿ ಪ್ರಧಾನಿ ಅನ್ವರುಲ್ ಹಕ್ ಕಾಕರ್ ಅವರ ವಿಶೇಷ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ.
ಮುಶಾಲ್ ಅವರ ಪತಿ, ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ -ಜೆಕೆಎಲ್‌ಎಫ್ ಕಮಾಂಡರ್ ಯಾಸಿನ್ ಮಲಿಕ್, ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಯಾಸಿನ್ ಮಲಿಕ್ 2009 ರಲ್ಲಿ ಇಸ್ಲಾಮಾಬಾದ್‌ನಲ್ಲಿ ಮುಶಾಲ್ ಅವರನ್ನು ಮದುವೆ ಆಗಿದ್ದರು. ಈ ಮದುವೆ ವೇಳೆ ಪಾಕಿಸ್ತಾನ ರಾಜಕೀಯದಲ್ಲಿರುವ ಉನ್ನತ ನಾಯಕರು ಭಾಗಿಯಾಗಿದ್ದರು.
ಈ ನಡುವೆ ಗುರುವಾರ ಅನ್ವರುಲ್ ಹಕ್ ಕಾಕರ್ ಅವರು ಪಾಕಿಸ್ತಾನದ ಹಂಗಾಮಿ ಪ್ರಧಾನಿ ಆಗಿ ಅಧಿಕಾರ ಸ್ವೀಕರಿಸಿದರು. ಐವಾನ್-ಎ-ಸದರ್‌ನಲ್ಲಿರುವ ಅಧ್ಯಕ್ಷ ಆರಿಫ್ ಅಲ್ವಿ ಅವರ ಅಧಿಕೃತ ನಿವಾಸದಲ್ಲಿ ಹಂಗಾಮಿ ಪ್ರಧಾನಿ ಆಗಿ ಅವರು ಅಧಿಕಾರ ಸ್ವೀಕರಿಸಿದರು. ಇವರೊಂದಿಗೆ ಸಂಪುಟದ 18 ಸದಸ್ಯರು ಪ್ರಮಾಣ ಸ್ವೀಕಾರ ಮಾಡಿದರು. ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವವರೆಗೆ ಈ ಸರ್ಕಾರ ಅಸ್ತಿತ್ವದಲ್ಲಿ ಇರಲಿದೆ. ಅಲ್ಲಿವರೆಗೆ ಹಂಗಾಮಿ ಸರ್ಕಾರ ಪಾಕಿಸ್ತಾನದಲ್ಲಿ ಆಳ್ವಿಕೆ ಮಾಡಲಿದೆ.
ಪಾಕಿಸ್ತಾನದದಲ್ಲಿ ಹೊಸ ಜನಗಣತಿಯ ಆಧಾರದ ಮೇಲೆ ಕ್ಷೇತ್ರಗಳ ಪುನರ್ವಿಂಗಡನೆ ಮಾಡಲು ಅಲ್ಲಿನ ಚುನಾವಣಾ ಆಯೋಗ ನಿರ್ಧರಿಸಿದೆ. ಹೀಗಾಗಿ ಪಾಕ್ನಲ್ಲಿ ಸಾರ್ವತ್ರಿಕ ಚುನಾವಣೆ ವಿಳಂಬವಾಗುವ ಸಾಧ್ಯತೆ ಇದೆ, ಪಾಕ್ನ ಚುನಾವಣಾ ಆಯೋಗ ಘೋಷಣೆ ಮಾಡಿರುವಂತೆ, ಸಂಸತ್ ವಿಸರ್ಜನೆಯ ನಂತರ ಚುನಾವಣೆ ನಡೆಸಲು 90 ದಿನಗಳ ಅವಧಿ ಇದೆ. ಆದರೆ ಕ್ಷೇತ್ರಗಳ ಪುನರ್ ವಿಂಗಡನೆ ಕೆಲಸ ಡಿಸೆಂಬರ್ 14ಕ್ಕೆ ಪೂರ್ಣಗೊಳ್ಳಲಿದೆ. ಹೀಗಾಗಿ ಈ ಬಾರಿ ಚುನಾವಣೆ ತಡವಾಗಲಿದೆ ಎಂದು ಅಲ್ಲಿನ ಚುನಾವಣಾ ಆಯೋಗ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಹಂಗಾಮಿ ಸರ್ಕಾರವನ್ನು ರಚನೆ ಮಾಡಲಾಗಿದೆ. ಈ ನಡುವೆ, ಪಾಕಿಸ್ತಾನದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದರಿಂದ ಪರಿಸ್ಥಿತಿ ನಿಭಾಯಿಸುವ ಹೊಣೆ ಹಂಗಾಮಿ ಸರ್ಕಾರದ ಮೇಲೆ ಬಿದ್ದಿದೆ.
ಹಂಗಾಮಿ ಸರ್ಕಾರದಲ್ಲಿ 16 ಕ್ಯಾಬಿನೆಟ್ ದರ್ಜೆ ಸಚಿವರು.. ಮೂವರು ಸಲಹೆಗಾರರು: ಮಾಜಿ ವಿದೇಶಾಂಗ ಕಾರ್ಯದರ್ಶಿ ಜಲೀಲ್ ಅಬ್ಬಾಸ್ ಜಿಲಾನಿ ಅವರನ್ನು ಹಂಗಾಮಿ ಸರ್ಕಾರದ ವಿದೇಶಾಂಗ ಸಚಿವರಾಗಿ ನೇಮಕ ಮಾಡಲಾಗಿದೆ. ಸರ್ಫರಾಜ್ ಬುಗ್ತಿ ಅವರನ್ನು ಗೃಹ ಸಚಿವರನ್ನಾಗಿ, ಶಂಶಾದ್ ಅಖ್ತರ್ ಹಣಕಾಸು ಸಚಿವರನ್ನಾಗಿ ನಿಯೋಜಿಸಲಾಗಿದೆ. ನಿವೃತ್ತ ಲೆಫ್ಟಿನೆಂಟ್ ಜನರಲ್ ಅನ್ವರ್ ಅಲಿ ಹೈದರ್ ರಕ್ಷಣಾ ಸಚಿವರಾಗಿ ಮತ್ತು ಹಿರಿಯ ಪತ್ರಕರ್ತ ಮುರ್ತಾಜಾ ಸೊಲಂಗಿ ಅವರನ್ನು ವಾರ್ತಾ ಸಚಿವರಾಗಿ ನೇಮಕ ಮಾಡಲಾಗಿದೆ.
ಅಲ್ಪಸಂಖ್ಯಾತರ ಸಚಿವರಾಗಿ ಖಲೀಲ್ ಜಾರ್ಜ್, ಕೈಗಾರಿಕೆ ಸಚಿವರಾಗಿ ಕೈಗಾರಿಕೋದ್ಯಮಿ ಗೋಹರ್ ಇಜಾಜ್, ಮಾಹಿತಿ ತಂತ್ರಜ್ಞಾನ ಸಚಿವರಾಗಿ ಶಿಕ್ಷಣ ತಜ್ಞ ಡಾ.ಉಮರ್ ಸೈಫ್, ಕಾನೂನು ಸಚಿವ ಅಹ್ಮದ್ ಇರ್ಫಾನ್ ಅಸ್ಲಾಂ, ಖ್ಯಾತ ನಟ ಜಮಾಲ್ ಶಾ ಸಂಸ್ಕೃತಿ ಸಚಿವ ಅನಿಕ್ ಅಹ್ಮದ್ ಧಾರ್ಮಿಕ ವ್ಯವಹಾರಗಳ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಇದನ್ನು ಓದಿ:ಉಗ್ರ ಯಾಸಿನ್ ಮಲಿಕ್ಗೆ ಜೀವಾವಧಿ ಶಿಕ್ಷೆ, ₹10 ಲಕ್ಷ ದಂಡ: ದೆಹಲಿ ಎನ್ಐಎ ಕೋರ್ಟ್ನಿಂದ ಮಹತ್ವದ ತೀರ್ಪು