ಜಿನೇವಾ (ಸ್ವಿಟ್ಜರ್ಲ್ಯಾಂಡ್) : ಇಸ್ರೇಲ್ ಮತ್ತು ಪ್ಯಾಲೆಸ್ಟೇನ್ ಹಮಾಸ್ ಉಗ್ರರ ನಡುವೆ ಕಳೆದೆರಡು ವಾರಗಳಿಂದ ಸಂಘರ್ಷ ನಡೆಯುತ್ತಿದೆ. ಇಸ್ರೇಲ್ ಹಮಾಸ್ ಉಗ್ರರ ಮೇಲೆ ದಾಳಿ ಮುಂದುವರೆಸಿದ್ದು, ಗಾಜಾಪಟ್ಟಿ ಮೇಲೆ ವೈಮಾನಿಕ ದಾಳಿ ಮುಂದುವರೆಸಿದೆ. ಇಸ್ರೇಲ್ನ ವೈಮಾನಿಕ ದಾಳಿಯಿಂದಾಗಿ ಗಾಜಾಪಟ್ಟಿಯಲ್ಲಿ ಪರಿಹಾರ ನಡೆಸಲು ಅಡ್ಡಿ ಉಂಟಾಗಿದೆ. ಕಳೆದ ಅಕ್ಟೋಬರ್ 7ರಿಂದ ಇಸ್ರೇಲ್ ಮತ್ತು ಪ್ಯಾಲೆಸ್ಟೇನ್ ಹಮಾಸ್ ಉಗ್ರರ ನಡುವೆ ಸಂಘರ್ಷ ನಡೆಯುತ್ತಿದ್ದು, ಉಭಯ ದೇಶಗಳ ಯುದ್ಧದಿಂದಾಗಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಗಾಜಾ ಪಟ್ಟಿ ಮೇಲೆ ಇಸ್ರೇಲ್ ಸೇನಾಪಡೆ ತನ್ನ ದಾಳಿಯನ್ನು ಮುಂದುವರೆಸಿದೆ.
ಇದರ ನಡುವೆ ಗಾಜಾಪಟ್ಟಿಯಲ್ಲಿ ಯುದ್ಧದಿಂದ ನಿರಾಶ್ರಿತರಾಗಿರುವ ಜನರಿಗೆ ಮಾನವೀಯ ನೆರವನ್ನು ನೀಡಲು ಹಲವು ರಾಷ್ಟ್ರಗಳು ಮುಂದೆ ಬಂದಿವೆ. ಇದರ ಜೊತೆಗೆ ಭಾರತವು ಹಲವು ಅಗತ್ಯ ವಸ್ತುಗಳನ್ನು ಪೂರೈಸಿದೆ. ಜೊತೆಗೆ ವಿಶ್ವ ಆರೋಗ್ಯ ಸಂಸ್ಥೆಯ ಸಿಬ್ಬಂದಿ ಗಾಜಾದಲ್ಲಿನ ನಿರಾಶ್ರಿತರಿಗೆ ಅಗತ್ಯ ನೆರವುಗಳನ್ನು ನೀಡುತ್ತಿದ್ದಾರೆ. ಆದರೆ, ಇದೀಗ ಇಸ್ರೇಲ್ ತನ್ನ ದಾಳಿಯನ್ನು ಹೆಚ್ಚಿಸಿರುವುದರಿಂದ ವಿಶ್ವ ಆರೋಗ್ಯ ಸಂಸ್ಥೆಯು ಗಾಜಾದಲ್ಲಿ ನಿರಾಶ್ರಿತರಿಗೆ ಸಹಾಯ ಮಾಡುತ್ತಿರುವ ಸಿಬ್ಬಂದಿಯೊಂದಿಗೆ, ಆರೋಗ್ಯ ಕಾರ್ಯಕರ್ತರೊಂದಿಗೆ ಸಂಪರ್ಕ ಕಡಿತಗೊಂಡಿರುವುದಾಗಿ ಎಂದು ಹೇಳಿದೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ವಿಶ್ವ ಆರೋಗ್ಯ ಸಂಸ್ಥೆಯು ಗಾಜಾದಲ್ಲಿ ನೆರವು ನೀಡುತ್ತಿದ್ದ ತನ್ನ ಸಿಬ್ಬಂದಿಯೊಂದಿಗೆ ಸಂಪರ್ಕ ಕಳೆದುಕೊಂಡಿದೆ. ನಮ್ಮ ಸಿಬ್ಬಂದಿ ಗಾಜಾದಲ್ಲಿ ನಿರಾಶ್ರಿತರಿಗೆ ನೆರವು ನೀಡುತ್ತಿದ್ದರು. ಸಿಬ್ಬಂದಿಗಳ ಸಂಪರ್ಕ ಕಡಿತಗೊಂಡಿರುವುದು ಅವರ ರಕ್ಷಣೆ ಮತ್ತು ಇತರ ನಿರಾಶ್ರಿತರ ಬಗ್ಗೆ ಕಳವಳ ಉಂಟು ಮಾಡುವಂತೆ ಮಾಡಿದೆ. ಈ ಕೂಡಲೇ ಇವರ ರಕ್ಷಣೆಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.