ಕೂಪನ್ ಹೇಗನ್: ಭಾರೀ ತಾಪಮಾನದಿಂದ ಯುರೋಪ್ನಲ್ಲಿ ಕಳೆದ ವರ್ಷ 60 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಪ್ರತಿ ವರ್ಷ ಜಾಗತಿಕ ತಾಪಮಾನ ಏರಿಕೆಯಾಗುತ್ತಿದ್ದು, ಈ ಹವಾಮಾನ ಬಿಕ್ಕಟ್ಟನ್ನು ನಿರ್ವಹಣೆ ಮಾಡಲು ತುರ್ತು ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ಒತ್ತಿ ಹೇಳಿದ್ದಾರೆ.
ಅಧಿಕ ತಾಪಮಾನದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯುವ ವರ್ಷದಿಂದ ವರ್ಷಕ್ಕೆ ಎಚ್ಚರಿಕೆ ಮೂಡಿಸುತ್ತಿದೆ ಎಂದು ವಿಶ್ವಸಂಸ್ಥೆ ಯುರೋಪ್ನ ಪ್ರಾದೇಶಿಕ ನಿರ್ದೇಶಕರಾದ ಹಾನ್ಸ್ ಕ್ಲೂಗೆ ತಿಳಿಸಿದ್ದಾರೆ.
ಶಾಖಕ್ಕೆ ತತ್ತರಿಸಿದ ಯುರೋಪ್: ಪ್ರಸ್ತುತ ದಕ್ಷಿಣ ಮತ್ತು ಪೂರ್ವ ಯುರೋಪ್ನಲ್ಲಿ ಅಪಾಯದ ವಲಯ ಇದೆ. ಜನರು ತಮ್ಮ ಹವಾಮಾನ ವರದಿಯನ್ನು ಪ್ರತಿನಿತ್ಯ ಪರಿಶೀಲಿಸಬೇಕಿದೆ. ಸ್ಥಳೀಯ ಮಾರ್ಗಸೂಚಿ ಪಾಲನೆ ಜೊತೆಗೆ ಹವಾಮಾನ ಸಂಬಂಧಿತ ಆರೋಗ್ಯ ಅಪಾಯ ಕುರಿತು ಮಾಹಿತಿ ನೀಡಬೇಕಿದೆ ಎಂದು ಅವರು ತಿಳಿಸಿದ್ದಾರೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ತಿಳಿಸಿದೆ.
ಈ ಬೇಸಿಗೆಯಲ್ಲಿ ಹೊಸ ವಾಸ್ತವತೆಗೆ ಹೊಂದಿಕೊಳ್ಳುವುದರ ಹೊರತಾಗಿ, ನಾವು ಮುಂದಿನ ವರ್ಷಗಳು ಮತ್ತು ದಶಕಗಳ ಕುರಿತು ಚಿಂತನೆ ಮಾಡಬೇಕಿದೆ. ಹವಾಮಾನ ಬಿಕ್ಕಟ್ಟನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಪ್ರಾದೇಶಿಕ ಮತ್ತು ಜಾಗತಿಕವಾಗಿ ತುರ್ತು ಕ್ರಮ ವಹಿಸಬೇಕಿದೆ. ಇದು ಮಾನವ ಜನಾಂಗಕ್ಕೆ ಭಾರೀ ಅಪಾಯ ಎಂದಿದ್ದಾರೆ.
ಹವಾಮಾನ ಬದಲಾವಣೆಯಿಂದ ಆರೋಗ್ಯ ಸವಾಲುಗಳ ಮೇಲೆ ತುರ್ತು, ವ್ಯಾಪಕವಾದ ಕ್ರಮಕ್ಕೆ ಆದ್ಯತೆ ನೀಡಬೇಕಿದೆ. ಇದಕ್ಕೆ ಬುಡಾಪೆಸ್ಟ್ ಡಿಕ್ಲೇರೇಷನ್ ಅಳವಡಿಸಿಕೊಳ್ಳಬೇಕಿದೆ. ನಮ್ಮ ಆರೋಗ್ಯ ವ್ಯವಸ್ಥೆಗಳ ಮೇಲೆ ಹವಾಮಾನ ಬದಲಾವಣೆಯ ಕೆಟ್ಟ ಪರಿಣಾಮಗಳನ್ನು ನಿವಾರಿಸುವ ಸಂಬಂಧ ಕ್ರಮಕ್ಕೆ ಮುಂದಾಗಬೇಕಿದೆ ಎಂದರು.