ವಾಷಿಂಗ್ಟನ್ ಡಿಸಿ( ಅಮೆರಿಕ);ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ನವೆಂಬರ್‌ನಲ್ಲಿ ಸಭೆಗೆ ಶ್ವೇತಭವನವು ಯೋಜಿಸುತ್ತಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಈ ಸಭೆಯು ಉಭಯ ದೇಶಗಳ ನಡುವಿನ ಸಂಬಂಧವನ್ನು ಸ್ಥಿರಗೊಳಿಸುವುದು, ಸುಧಾರಿಸುವ ಪ್ರಯತ್ನವಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ಉಭಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿ ಸುಧಾರಣೆಗೆ ಅಮೆರಿಕ ಮುಂದಾಗಿದೆ ಎಂದು ತಿಳಿದು ಬಂದಿದೆ.
ನವೆಂಬರ್ ಸಭೆ ಬಗ್ಗೆ ಇನ್ನೂ ಅಧಿಕೃತ ತೀರ್ಮಾನ ಆಗಿಲ್ಲ. ಔಪಚಾರಿಕವಾಗಿ ಸಭೆ ನಿಗದಿ ಆಗಿರುವ ಬಗ್ಗೆ ಘೋಷಣೆ ಆಗಿಲ್ಲ. ಆದರೆ ಈ ಬಗ್ಗೆ ಮಾತನಾಡುವ ಅಮೆರಿಕ ಆಡಳಿತದ ಅಧಿಕಾರಿಯೊಬ್ಬರು ಸಭೆ ನಡೆಯಲಿದೆ ಎಂದು ದೃಢಪಡಿಸಿದ್ದಾರೆ. ನಾವು ಈ ಬಗ್ಗೆ ಯೋಜನೆಯೊಂದನ್ನು ರೂಪಿಸಿದ್ದು, ಸಂಬಂಧ ಸುಧಾರಣಾ ಕ್ರಮ ಪ್ರಾರಂಭಿಸುತ್ತಿದ್ದೇವೆ" ಎಂದು ಹೇಳಿದ್ದಾರೆ. ಈ ಸಂಬಂಧ ಹಿರಿಯ ಆಡಳಿತ ಅಧಿಕಾರಿಯೊಬ್ಬರು ಮಾತನಾಡಿ, ಅಮೆರಿಕ ಅಧ್ಯಕ್ಷ ಬೈಡನ್ ಅವರು ಚೀನಾ ಅಧ್ಯಕ್ಷ ಜಿನ್‌ಪಿಂಗ್ ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ "ಇನ್ನೂ ಯಾವುದಕ್ಕೂ ದೃಢೀಕರಣ ಸಿಕ್ಕಿಲ್ಲ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಮುಂಬರುವ ವಾರಗಳಲ್ಲಿ ವಾಷಿಂಗ್ಟನ್‌ಗೆ ಭೇಟಿ ನೀಡಲಿದ್ದು, ಆ ಬಳಿಕವೇ ಸಂಬಂದ ಸುಧಾರಣೆಯ ಯೋಜನೆಗಳು ಸ್ಪಷ್ಟವಾಗುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.