ವಾಷಿಂಗ್ಟನ್:ಈ ಹಿಂದೆ ಭಾರತದಲ್ಲಿ ಮನೆ ಮಾತಾಗಿದ್ದ ಸಾಮಾಜಿಕ ಜಾಲತಾಣದ ಆ್ಯಪ್ ಟಿಕ್ ಟಾಪ್, ದೇಶದ ಬಹುತೇಕ ಜನರ ಮೊಬೈಲ್ನಲ್ಲಿ ಜಾಗ ಪಡೆದಿತ್ತು. ಬಳಿಕ ಭದ್ರತಾ ದೃಷ್ಟಿಯಿಂದ ಕೇಂದ್ರ ಸರ್ಕಾರವು ಟಿಕ್ ಟಾಕ್ ಸೇರಿದಂತೆ ಚೀನಾದ ಕೆಲವು ಆ್ಯಪ್ಗಳನ್ನು ನಿರ್ಬಂಧಿಸಿ ಆದೇಶ ಹೊರಡಿಸಿತ್ತು. ಇದೀಗ ಅಮೆರಿಕದ ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿಗೆ ಬೆದರಿಕೆ ಕಾರಣ ಚೀನಾದ ಜನಪ್ರಿಯ ವಿಡಿಯೋ ಆ್ಯಪ್ ಟಿಕ್‌ಟಾಕ್ ಅನ್ನು ಸರ್ಕಾರ ಸೈಟ್ಗಳಿಂದ ತೆಗೆದು ಹಾಕಲು ಶ್ವೇತಭವನವು ಎಲ್ಲಾ ಫೆಡರಲ್ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಅಲ್ಲದೇ, 30 ದಿನದಲ್ಲಿ ಇದನ್ನು ಕಾರ್ಯಗತ ಮಾಡಿ ಎಂದು ಗಡುವು ನೀಡಿದೆ.
ಆಫೀಸ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಬಜೆಟ್ ಸೋಮವಾರ ಹೊರಡಿಸಿದ ಮಾರ್ಗಸೂಚಿಯಲ್ಲಿ, ಸರ್ಕಾರದ ಸೂಕ್ಷ್ಮ ದಾಖಲೆಗಳಿಗೆ ಅಪಾಯವನ್ನುಂಟು ಮಾಡುವ ಆತಂಕದ ಕಾರಣ ಟಿಕ್‌ಟಾಕ್ ಅನ್ನು ಸರ್ಕಾರಿ ಸೈಟ್ಗಳಲ್ಲಿ ಹೊಂದದಂತೆ ಸೂಚಿಸಲಾಗಿದೆ.
ರಕ್ಷಣಾ ಇಲಾಖೆಗಳು, ಹೋಮ್ಲ್ಯಾಂಡ್ ಸೆಕ್ಯುರಿಟಿ ಮತ್ತು ಸ್ಟೇಟ್ ಸೇರಿದಂತೆ ಕೆಲವು ಸಂಸ್ಥೆಗಳು ಈಗಾಗಲೇ ಈ ನಿರ್ಬಂಧಗಳನ್ನು ಹೊಂದಿವೆ. ಇನ್ನುಳಿದ ಸರ್ಕಾರಿ ಇಲಾಖೆಗಳೂ ಇದನ್ನು ಪಾಲಿಸಬೇಕು. ಹೀಗಾಗಿ 30 ದಿನಗಳಲ್ಲಿ ಆ್ಯಪ್ ಅನ್ನು ಸಂಪೂರ್ಣವಾಗಿ ನಿಷೇಧಿಸಿ ಅದರ ಲಿಂಕ್ ಅನ್ನು ಅಳಿಸಿ ಹಾಕಬೇಕು ಎಂದು ತಿಳಿಸಿದೆ.
ಜೋ ಬಿಡೆನ್ ಸರ್ಕಾರ ರಾಷ್ಟ್ರದ ಡಿಜಿಟಲ್ ಮೂಲಸೌಕರ್ಯವನ್ನು ರಕ್ಷಿಸಲು ಮತ್ತು ಅಮೆರಿಕನ್ನರ ಡೇಟಾಗೆ ವಿದೇಶಿಗರ ಪ್ರವೇಶವನ್ನು ನಿಗ್ರಹಿಸುವುದು ಮುಖ್ಯವಾಗಿದೆ. ಈ ಕ್ರಮ ನಮ್ಮ ಡಿಜಿಟಲ್ ಮೂಲಸೌಕರ್ಯದ ಸುರಕ್ಷತೆ, ಜನರ ಭದ್ರತೆ ಮತ್ತು ಗೌಪ್ಯತೆಯನ್ನು ರಕ್ಷಿಸಲು ಕೈಗೊಂಡ ಕ್ರಮವಾಗಿದೆ ಎಂದು ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ ಕ್ರಿಸ್ ಡೆರುಶಾ ಹೇಳಿದರು.