ವಾಷಿಂಗ್ಟನ್, ಅಮೆರಿಕ : ಭಾರತವು ಯುನೈಟೆಡ್ ಸ್ಟೇಟ್ಸ್‌ನ ಕಾರ್ಯತಂತ್ರದ ಪಾಲುದಾರ ದೇಶವಾಗಿದ್ದು, ಅಮೆರಿಕದ ಪ್ರಜೆಯಾಗಿರುವ ಪ್ರತ್ಯೇಕತಾವಾದಿ ಸಿಖ್ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಯ ಸಂಚಿನ ಹಿಂದೆ ಯಾರಿದ್ದಾರೋ ಅವರನ್ನು ಹೊಣೆಗಾರರನ್ನಾಗಿ ಮಾಡಿ ಶಿಕ್ಷೆಗೆ ಗುರಿಯಾಗಿಸಬೇಕು ಎಂದು ಶ್ವೇತಭವನವು ಒತ್ತಾಯಿಸಿದೆ.
ಶ್ವೇತಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್ ಕಿರ್ಬಿ, "ಭಾರತವು ಅಮೆರಿಕದ ಕಾರ್ಯತಂತ್ರದ ಪಾಲುದಾರ. ಎರಡು ದೇಶಗಳ ನಡುವಣ ಬಾಂಧವ್ಯ ಮತ್ತಷ್ಟು ಸದೃಢವಾಗಿದೆ. ನಾವು ಆ ಕಾರ್ಯತಂತ್ರದ ಪಾಲುದಾರಿಕೆಯನ್ನು ಆಳಗೊಳಿಸುತ್ತಿದ್ದೇವೆ. ಜೊತೆಗೆ, ಭಾರತ ಮತ್ತು ಅಮೆರಿಕ ಪೆಸಿಫಿಕ್‌ನ ಕ್ವಾಡ್ ಸದಸ್ಯ ರಾಷ್ಟ್ರಗಳಾಗಿವೆ. ನಾವು ಅವರೊಂದಿಗೆ ಹಲವಾರು ಸಮಸ್ಯೆಗಳ ಕುರಿತು ಚರ್ಚಿಸಲು ಭಾಗವಹಿಸುತ್ತೇವೆ. ಈ ಸಂದರ್ಭದಲ್ಲೇ ಪನ್ನುನ್ ಹತ್ಯೆಯ ಸಂಚಿನ ಆರೋಪಗಳ ಗಂಭೀರತೆಯನ್ನು ಸಹ ಗುರುತಿಸುತ್ತೇವೆ" ಎಂದು ಹೇಳಿದರು.
ಭಾರತ - ಅಮೆರಿಕ ದ್ವಿಪಕ್ಷೀಯ ಬಾಂಧವ್ಯದ ಮೇಲೆ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಾನ್ ಕಿರ್ಬಿ, "ನಾವು ಪನ್ನುನ್ ಹತ್ಯೆಯ ಸಂಚಿನ ಬಗ್ಗೆ ಸಂಪೂರ್ಣವಾಗಿ ತನಿಖೆ ಮಾಡಬೇಕು ಎಂದು ಬಯಸುತ್ತೇವೆ ಮತ್ತು ಇದರ ಯಾರಿದ್ದಾರೋ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು. ಈಗಾಗಲೇ ನಮ್ಮ ಭಾರತೀಯ ಸಹವರ್ತಿಗಳು ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಮಾಡುತ್ತಿರುವುದು ನಮಗೆ ಸಂತೋಷವಾಗಿದೆ. ಈ ದಾಳಿಗಳಿಗೆ ಕಾರಣರಾದವರನ್ನು ಸಂಪೂರ್ಣ ಹೊಣೆಗಾರರನ್ನಾಗಿ ಮಾಡಬೇಕು ಎಂದು ನಾವು ಒತ್ತಾಯಿಸುತ್ತೇವೆ" ಎಂದು ಹೇಳಿದರು.