ವಾಷಿಂಗ್ಟನ್: ಜಾಗತಿಕ ಆರ್ಥಿಕ ಸಹಕಾರದ ಪ್ರಧಾನ ವೇದಿಕೆಯಾಗಿರುವ ಜಿ 20 ಸುಧಾರಣೆಗೆ ಅಮೆರಿಕ ಬದ್ಧವಾಗಿದೆ ಎಂಬುದನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಪುನರುಚ್ಚರಿಸಲಿದ್ದಾರೆ. ಈ ಬಾರಿಯ ಜಿ-20 ಶೃಂಗಸಭೆಯಲ್ಲಿ ಉಕ್ರೇನ್ - ರಷ್ಯಾ ಯುದ್ಧದ ಸಾಮಾಜಿಕ ಪರಿಣಾಮಗಳು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಅಮೆರಿಕ ಅಧ್ಯಕ್ಷರು ಮಾತನಾಡಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ಮಂಗಳವಾರ ಈ ಬಗ್ಗೆ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್ ಪಿಯರ್ ಅವರು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.
ಅಧ್ಯಕ್ಷರ ಪ್ರವಾಸದ ವೇಳಾಪಟ್ಟಿ ಪ್ರಕಟಿಸಿದ ಪಿಯರೆ, ಬೈಡನ್ ಅವರು ನವದೆಹಲಿಯಲ್ಲಿ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಸೆಪ್ಟೆಂಬರ್ 10 ರಂದು ವಿಯೆಟ್ನಾಂನ ಹನೋಯ್‌ಗೆ ಪ್ರಯಾಣಿಸಲಿದ್ದಾರೆ ಎಂದು ಹೇಳಿದರು. ಜಿ-20 ಜಾಗತಿಕವಾಗಿ ಆರ್ಥಿಕ ಸಹಕಾರದ ಪ್ರಧಾನ ವೇದಿಕೆಯಾಗಿದ್ದು, ಅಮೆರಿಕ ತನ್ನ ಬದ್ಧತೆಯನ್ನು ಪುನರುಚ್ಚರಿಸಲಿದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.
ಅಧ್ಯಕ್ಷ ಬೈಡನ್ ಅವರು ಜಾಗತಿಕ ಸಮಸ್ಯೆಗಳನ್ನು ನಿಭಾಯಿಸಲು ಜಂಟಿ ಪ್ರಯತ್ನಗಳ ಕುರಿತು ಜಿ-20 ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕ್ಲೀನ್ ಇಂಧನ ಪರಿವರ್ತನೆ ಮತ್ತು ಹವಾಮಾನ ಬದಲಾವಣೆ ವಿರುದ್ಧ ಹೋರಾಡಲು ಹಾಗೂ ಉಕ್ರೇನ್‌ನಲ್ಲಿ ರಷ್ಯಾದ ಯುದ್ಧದ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳನ್ನು ತಗ್ಗಿಸುವ ಕುರಿತಂತೆ ಸಭೆಯಲ್ಲಿ ಅಮೆರಿಕ ಪ್ರಸ್ತಾಪಿಸಲಿದೆ. ಅಷ್ಟೇ ಅಲ್ಲ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‌ಗಳ ಸಾಮರ್ಥ್ಯ ಹೆಚ್ಚಳ, ಬಡತನದ ವಿರುದ್ಧದ ಹೋರಾಟ ಹಾಗೂ ಪ್ರಪಂಚದಾದ್ಯಂತದ ದೇಶಗಳನ್ನು ಬಾಧಿಸುತ್ತಿರುವ ಮಹತ್ವದ ಅಂತಾರಾಷ್ಟ್ರೀಯ ಸವಾಲುಗಳ ಬಗ್ಗೆ ಈ ಬಾರಿಯ ಜಿ - 20 ಸಭೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದು ಶ್ವೇತಭವನದ ಕಾರ್ಯದರ್ಶಿಗಳು ಮಾಹಿತಿ ನೀಡಿದ್ದಾರೆ.