ವಾಷಿಂಗ್ಟನ್(ಅಮೆರಿಕ):ಉಕ್ರೇನ್ ಮೇಲಿನ ರಷ್ಯಾ ದಾಳಿ ಮುಂದುವರೆದಿದೆ. ಯುದ್ಧ ನಿಲ್ಲಿಸಲು ಹಲವು ಸುತ್ತಿನ ಸಂಧಾನ ಸಭೆಗಳ ಬಳಿಕವೂ ರಷ್ಯಾ ಮಾತ್ರ ದಾಳಿ ನಿಲ್ಲಿಸಲು ತಯಾರಿಲ್ಲ. ಈ ನಡುವೆ ಅಮೆರಿಕ ಉಕ್ರೇನ್ ನೆರವಿಗೆ ನಿಂತಿದ್ದು, ಹೆಚ್ಚುವರಿಯಾಗಿ ಮತ್ತೆ 500 ಮಿಲಿಯನ್ ಡಾಲರ್ ನೇರ ನೆರವು ನೀಡುವ ವಾಗ್ದಾನ ಮಾಡಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ದೂರವಾಣಿ ಕರೆ ಮಾಡಿ 55 ನಿಮಿಷಕ್ಕೂ ಹೆಚ್ಚು ಕಾಲ ಮಾತನಾಡಿದರು. ಈ ವೇಳೆ ಉಕ್ರೇನ್‌ಗೆ ಹೆಚ್ಚುವರಿ ನೆರವು ನೀಡುವ ವಾಗ್ದಾನ ಮಾಡಿದರು. ಉಕ್ರೇನ್‌ಗೆ ಈಗಾಗಲೇ ನೀಡಲಾದ ಭದ್ರತಾ ನೆರವು ಶಸ್ತ್ರಾಸ್ತ್ರಗಳ ಪೂರೈಕೆ ಹಾಗೂ ಅದರಿಂದಾಗಿರುವ ಪರಿಣಾಮಗಳ ಬಗ್ಗೆ ಅಮೆರಿಕ ಪರಿಶೀಲನೆ ಕೂಡಾ ನಡೆಸಿದೆ.
ಅಮೆರಿಕ ಅಧ್ಯಕ್ಷರ ಮಾತುಕತೆ ವೇಳೆ, ತಮಗೆ ಮಿಲಿಟರಿ ಜೆಟ್ಗಳನ್ನು ಪೂರೈಕೆ ಮಾಡುವಂತೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಒತ್ತಾಯಿಸಿದರು. ಇದೇ ವೇಳೆ ಅವರು ಯುರೋಪಿಯನ್ ಒಕ್ಕೂಟದ ನಾಯಕರಿಗೆ ಮಿಲಿಟರಿ ನೆರವು ನೀಡುವಂತೆ ಮನವಿ ಮಾಡಿದ್ದಾರೆ. ಆದರೆ, ಇದುವರೆಗೂ ಉಕ್ರೇನ್‌ಗೆ ನೇರವಾಗಿ ಮಿಲಿಟರಿ ನೆರವು ನೀಡಲು ಸಾಧ್ಯವಾಗಿಲ್ಲ. ಯಾಕೆಂದರೆ ಉಕ್ರೇನ್ ನ್ಯಾಟೋ ರಾಷ್ಟ್ರಗಳ ಭಾಗವಾಗಿಲ್ಲ.