ರಷ್ಯಾ ಮೇಲೆ ಪಾಶ್ಚಿಮಾತ್ಯ ರಾಷ್ಟ್ರಗಳು ವಿಧಿಸಿದ ಆರ್ಥಿಕ ನಿರ್ಬಂಧಗಳಿಂದಾಗಿಯೇ ವಿಶ್ವದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆರೋಪಿಸಿದ್ದಾರೆ.
ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟು ಕುಸಿತ, ನಿರುದ್ಯೋಗ ಹೆಚ್ಚಳ, ಕಚ್ಚಾ ವಸ್ತುಗಳ ಕೊರತೆ ಮತ್ತು ಜಗತ್ತಿನಾದ್ಯಂತ ಆಹಾರ ಭದ್ರತೆಗೆ ಅಪಾಯ ಎದುರಾಗಿರುವುದು ಎಲ್ಲವೂ ಪಾಶ್ಚಿಮಾತ್ಯ ರಾಷ್ಟ್ರಗಳ ಆರ್ಥಿಕ ನಿರ್ಬಂಧಗಳಿಂದಲೇ ಎಂದು ಪುಟಿನ್ ಹೇಳಿದ್ದಾರೆ.
ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿರುವ ಬ್ರಿಕ್ಸ್ ಸಭೆಯ ಅಂಗವಾಗಿ ನಡೆದ ವ್ಯಾಪಾರ ವಹಿವಾಟು ಸಮಾವೇಶದಲ್ಲಿ ಮಾತನಾಡಿದ ಪುಟಿನ್, ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ಗುಂಪಿಗೆ ವ್ಯಾಪಾರ ವಹಿವಾಟುಗಳನ್ನು ಕೇಂದ್ರೀಕರಿಸುವ ಮತ್ತು ಕಚ್ಚಾತೈಲವನ್ನು ರಫ್ತು ಮಾಡುವ ಪ್ರಕ್ರಿಯೆಗಳನ್ನು ರಷ್ಯಾ ಆರಂಭಿಸಿತ್ತು ಎಂದು ಹೇಳಿದರು.
"ರಾಜಕೀಯ ಪ್ರೇರಿತ ಹೊಸ ನಿರ್ಬಂಧಗಳನ್ನು ಪದೇ ಪದೇ ಹೇರಲಾಗುತ್ತಿದೆ. ಸ್ಪರ್ಧಾತ್ಮಕ ವ್ಯಾಪಾರ ವಹಿವಾಟಿನ ಮೇಲೆ ಮೇಲಿಂದ ಮೇಲೆ ಒತ್ತಡ ಹೇರಲಾಗುತ್ತಿದೆ. ಸಹಕಾರ ಪ್ರಕ್ರಿಯೆಯನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡಲಾಗುತ್ತಿದೆ. ಸರಕು ಸಾಗಣೆ ಮತ್ತು ಸಾರಿಗೆ ಕೊಂಡಿಗಳು ಹಾಳಾಗುತ್ತಿವೆ. ಪ್ರಾಥಮಿಕ ಆರ್ಥಿಕ ನೀತಿಗೆ ಇದೆಲ್ಲವೂ ವಿರುದ್ಧವಾಗಿದೆ. ಈ ನೀತಿಗಳು ಜಾಗತಿಕ ವ್ಯಾಪಾರ ವಹಿವಾಟಿಗೆ ಮಾರಕವಾಗಿವೆ. ಇದರಿಂದ ಬಹುತೇಕ ಎಲ್ಲ ದೇಶಗಳ ಜನರ ಉತ್ತಮ ಜೀವನ ಹಾಳಾಗುತ್ತದೆ. ಇದರ ಪರಿಣಾಮದಿಂದ ಜಾಗತಿಕ ಆರ್ಥಿಕ ವಲಯದಲ್ಲಿ ಸಮಸ್ಯೆಗಳು ಬೃಹದಾಕಾರ ತಾಳುತ್ತಿವೆ." ಎಂದು ಪುಟಿನ್ ತಿಳಿಸಿದರು.
ತಮ್ಮ ನೆರೆಯ ರಾಷ್ಟ್ರ ಉಕ್ರೇನ್ ವಿರುದ್ಧ ಫೆಬ್ರವರಿ 24 ರಂದು ಪುಟಿನ್ ಭಾರಿ ಯುದ್ಧ ಸಾರಿದ್ದರು. ಇದರಿಂದ ಕುಪಿತಗೊಂಡ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ ವಿರುದ್ಧ ಬಹುದೊಡ್ಡ ಪ್ರಮಾಣದ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದ್ದವು.
ಇದನ್ನೂ ಓದಿ:ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ 'ರಕ್ತದ ಕ್ಯಾನ್ಸರ್, ಆರೋಗ್ಯ ಗಂಭೀರ': ವರದಿ