ಕರ್ನಾಟಕ

karnataka

ETV Bharat / international

West Bank violence: ಮೂವರು ಶಂಕಿತ ಪ್ಯಾಲೆಸ್ತೀನ್ ಉಗ್ರರನ್ನು ಕೊಂದ ಇಸ್ರೇಲ್​ ಸೇನೆ

ವೆಸ್ಟ್ ಬ್ಯಾಂಕ್ ಹಿಂಸಾಚಾರ ಉಲ್ಬಣಗೊಂಡಿದ್ದು, ಇಸ್ರೇಲ್ ಪಡೆ ಮೂವರು ಶಂಕಿತ ಪ್ಯಾಲೆಸ್ತೀನ್ ಉಗ್ರರನ್ನು ಹತ್ಯೆ ಮಾಡಿದೆ ಎಂದು ವರದಿಯಾಗಿದೆ.

By

Published : Aug 7, 2023, 10:44 AM IST

Israeli army kills Palestinian militants
ಪ್ಯಾಲೆಸ್ತೀನ್ ಉಗ್ರರನ್ನು ಕೊಂದ ಇಸ್ರೇಲ್​ ಸೇನೆ

ಜೆರುಸಲೇಂ:ಇಸ್ರೇಲ್​ ಪಡೆಗಳು ಭಾನುವಾರ ಉತ್ತರ ವೆಸ್ಟ್ ಬ್ಯಾಂಕ್‌ನಲ್ಲಿ ಮೂವರು ಪ್ಯಾಲೆಸ್ತೀನ್ ಉಗ್ರರನ್ನು ಕೊಂದಿದ್ದು, ಹಿಂಸಾಚಾರ ಭುಗಿಲೆದ್ದಿದೆ. ಕಳೆದ ತಿಂಗಳು ಬೃಹತ್​ ಪ್ರಮಾಣದ ಸೇನಾ ಕಾರ್ಯಾಚರಣೆ ನಡೆದಿದ್ದ ಜೆನಿನ್ ನಿರಾಶ್ರಿತರ ಶಿಬಿರದ ಬಳಿ ಈ ಮೂವರನ್ನು ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್​ ಸೇನೆ ಹೇಳಿದೆ. ಮೂವರು ವ್ಯಕ್ತಿಗಳು ಶಿಬಿರದಿಂದ ಹೊರ ಬಂದು ದಾಳಿ ನಡೆಸಲು ಹೊರಟಿದ್ದರು. ಅವರ ವಾಹನದಿಂದ M-16 ರೈಫಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಸ್ರೇಲ್​ ಸೇನೆ ಹೇಳಿದೆ.

ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದ್ ಉಗ್ರಗಾಮಿ ಗುಂಪುಗಳು ಈ ಹತ್ಯೆಗಳನ್ನು ಖಂಡಿಸಿವೆ. ಆದರೂ ಮೂವರು ವ್ಯಕ್ತಿಗಳು ಯಾವುದಾದರೂ ಸಂಘಟನೆಗೆ ಸೇರಿದವರೇ? ಎಂಬ ಬಗ್ಗೆ ಈವರೆಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಇಸ್ರೇಲ್ ಗುಂಪಿನ ನಾಯಕನನ್ನು 26 ವರ್ಷದ ನೈಫ್ ಅಬು ತ್ಸುಯಿಕ್ ಎಂದು ಗುರುತಿಸಿದೆ.

ಉಗ್ರಗಾಮಿಗಳ ಭದ್ರಕೋಟೆ: ಜೆನಿನ್ ಶಿಬಿರವನ್ನು ಉಗ್ರಗಾಮಿಗಳ ಭದ್ರಕೋಟೆ ಎಂದು ಕರೆಯಲಾಗುತ್ತದೆ. ಕಳೆದ ತಿಂಗಳು, ಸೇನೆಯು ಶಿಬಿರದಲ್ಲಿ ಎರಡು ದಿನಗಳ ಆಕ್ರಮಣವನ್ನು ನಡೆಸಿತು. ಕನಿಷ್ಠ ಎಂಟು ಉಗ್ರಗಾಮಿಗಳು ಸೇರಿದಂತೆ 12 ಪ್ಯಾಲೆಸ್ಟೀನಿಯನ್ನರನ್ನು ಕೊಂದಿತ್ತು. ಇದರಿಂದ ಜನನಿಬಿಡ ಪ್ರದೇಶಕ್ಕೆ ವ್ಯಾಪಕ ಹಾನಿ ಉಂಟಾಗಿತ್ತು. ಈ ಹೋರಾಟದಲ್ಲಿ ಇಸ್ರೇಲಿ ಸೈನಿಕನೂ ಹತನಾಗಿದ್ದ. 2022ರ ಆರಂಭದಲ್ಲಿ ಪ್ರಾರಂಭವಾದ ಹಿಂಸಾಚಾರ ಇದೀಗ ಮತ್ತೆ ಉಲ್ಬಣಗೊಂಡಿದೆ. ಡಿಸೆಂಬರ್‌ನಲ್ಲಿ ಇಸ್ರೇಲ್‌ನ ಹೊಸ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಅದು ವೇಗ ಪಡೆದುಕೊಂಡಿದೆ.

ಪ್ರಧಾನಿ ಬೆಂಜಮಿನ್​ಗೆ ಎಚ್ಚರಿಕೆ: ವಸಾಹತುಗಾರರ ಚಳುವಳಿಯೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವ ಅಲ್ಟ್ರಾನ್ಯಾಷನಲಿಸ್ಟ್ ವೆಸ್ಟ್ ಬ್ಯಾಂಕ್ ವಸಾಹತುದಾರರು ಮತ್ತು ಇತರ ಮಿತ್ರರಿಂದ ಸರ್ಕಾರ ಪ್ರಾಬಲ್ಯ ಹೊಂದಿದೆ. ಯುವ ಉಗ್ರಗಾಮಿ ವಸಾಹತುಗಾರರನ್ನು ಪ್ಯಾಲೆಸ್ಟೀನಿಯರ ಮೇಲೆ ದಾಳಿ ಮಾಡಲು ಧೈರ್ಯ ತುಂಬುವ ಮೂಲಕ ಉದ್ವಿಗ್ನ ವಾತಾವರಣ ಸೃಷ್ಟಿಸಿದ್ದಾರೆ. ವಸಾಹತುಗಾರರ ಹಿಂಸಾಚಾರವು ಆಯಕಟ್ಟಿನ ಬೆದರಿಕೆಯಾಗುತ್ತಿದೆ ಮತ್ತು ಪ್ರತೀಕಾರವಾಗಿ ಪ್ಯಾಲೇಸ್ಟಿನಿಯನ್ ದಾಳಿಯ ಸಾಧ್ಯತೆ ಹೆಚ್ಚಿಸುತ್ತಿದೆ ಎಂದು ಶಿನ್ ಬೆಟ್ ಆಂತರಿಕ ಭದ್ರತಾ ಸಂಸ್ಥೆಯ ಮುಖ್ಯಸ್ಥ ರೋನೆನ್ ಬಾರ್ ಇತ್ತೀಚೆಗೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಇಸ್ರೇಲ್​ ಸುದ್ದಿ ವಾಹಿನಿಯೊಂದು ಭಾನುವಾರ ವರದಿ ಮಾಡಿದೆ.

ವರದಿಯ ಪ್ರಕಾರ ಸರ್ಕಾರದ ಪ್ರಮುಖ ಸದಸ್ಯರು ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಶಸ್ತ್ರಸಜ್ಜಿತ ವಸಾಹತುಗಾರರು ಪ್ಯಾಲೇಸ್ಟಿನಿಯನ್ ಹಳ್ಳಿಯೊಂದಕ್ಕೆ ನುಗ್ಗಿ 19 ವರ್ಷದ ಯುವಕನನ್ನು ಕೊಂದು, ಶುಕ್ರವಾರ ರಾತ್ರಿ ಘಟನೆಯ ಮೊದಲು ಈ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಶನಿವಾರ ಪ್ಯಾಲೇಸ್ಟಿನಿಯನ್ ಬಂದೂಕುದಾರಿ, ಇಸ್ರೇಲಿ ಭದ್ರತಾ ಸಿಬ್ಬಂದಿಯನ್ನು ಸೆಂಟ್ರಲ್ ಟೆಲ್ ಅವಿವ್‌ನಲ್ಲಿ ಗುಂಡಿಕ್ಕಿ ಕೊಂದಿದ್ದ.

ಭಾನುವಾರ ಮುಂಜಾನೆ, ಇಸ್ರೇಲ್​ ಮಿಲಿಟರಿ ಶನಿವಾರದ ಟೆಲ್ ಅವಿವ್ ಹತ್ಯೆಯಲ್ಲಿ ಪ್ಯಾಲೆಸ್ತೀನ್ ದಾಳಿಕೋರನ ಮನೆಯನ್ನು ಜೆನಿನ್ ಬಳಿಯ ರುಮಾನಾ ಗ್ರಾಮದಲ್ಲಿ ಧ್ವಂಸಗೊಳಿಸಲು ತಯಾರಿ ನಡೆಸಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. ಭವಿಷ್ಯದ ದಾಳಿ ತಡೆಯುವ ಉದ್ದೇಶದಿಂದ ಮನೆ ಕೆಡವಲು ಉದ್ದೇಶಿಸಲಾಗಿದೆ ಎಂದು ಇಸ್ರೇಲ್ ಹೇಳಿದೆ.

160ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಸಾವು:ಇಸ್ರೇಲಿಗಳ ವಿರುದ್ಧ ಪ್ಯಾಲೇಸ್ಟಿನಿಯನ್ ಗುಂಪುಗಳ ಗುಂಡಿನ ದಾಳಿಗಳನ್ನು ಮಾಡುತ್ತಿವೆ. ಇದಕ್ಕೆ ಪ್ರತಿಯಾಗಿ ಇಸ್ರೇಲಿ ಮಿಲಿಟರಿಯಿಂದ ಬಂಧನ, ದಾಳಿ ಹಾಗೂ ಉಗ್ರಗಾಮಿ ಯಹೂದಿ ವಸಾಹತುಗಾರರಿಂದ ಹೆಚ್ಚುತ್ತಿರುವ ದಾಳಿಗಳಿಂದಾಗಿ ಉತ್ತರ ಪಶ್ಚಿಮ ದಂಡೆಯಲ್ಲಿ ಹಿಂಸಾಚಾರ ಉಲ್ಬಣಗೊಂಡಿದೆ. ಅಸೋಸಿಯೇಟೆಡ್ ಪ್ರೆಸ್‌ನ ಲೆಕ್ಕಾಚಾರದ ಪ್ರಕಾರ, ವೆಸ್ಟ್ ಬ್ಯಾಂಕ್ ಮತ್ತು ಪೂರ್ವ ಜೆರುಸಲೆಮ್‌ನಲ್ಲಿ ಈ ವರ್ಷ ಇಸ್ರೇಲ್​ ದಾಳಿಯಿಂದ 160ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಹೆಚ್ಚಿನವರು ಉಗ್ರಗಾಮಿಗಳು ಎಂದು ಇಸ್ರೇಲ್ ಹೇಳುತ್ತದೆ. ಆದರೆ ಸೇನೆಯ ದಾಳಿಯನ್ನು ಪ್ರತಿಭಟಿಸುವ ಕಲ್ಲು ತೂರಾಟ ನಡೆಸಿದ ಯುವಕರು ಮತ್ತು ಮುಗ್ಧ ಜನರು ಸಹ ಕೊಲ್ಲಲ್ಪಟ್ಟಿದ್ದಾರೆ ಎಂದು ಪ್ಯಾಲೇಸ್ತೀನ್​​ ಕಡೆಯವರ ಆರೋಪವಾಗಿದೆ. ಇನ್ನೊಂದಡೆ ಈ ವರ್ಷ ಇಲ್ಲಿವರೆಗೂ ಪ್ಯಾಲೆಸ್ತೀನ್ ದಾಳಿಯಲ್ಲಿ ಕನಿಷ್ಠ 26 ಇಸ್ರೇಲಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:Israel Palestine Conflict: ವೆಸ್ಟ್​ ಬ್ಯಾಂಕ್​ ಮೇಲೆ ಇಸ್ರೇಲ್ ದಾಳಿ; ಹಾನಿ ಪರಿಶೀಲಿಸಿದ ರಾಜತಾಂತ್ರಿಕರ ನಿಯೋಗ

ABOUT THE AUTHOR

...view details