ನಿಯಾಮಿ (ಪಶ್ಚಿಮ ಆಫ್ರಿಕಾ): ನೈಜರ್ ದೇಶದ ಸೇನಾ ನಾಯಕರ ಮೇಲೆ ಭಾನುವಾರ ಆರ್ಥಿಕ ಹಾಗೂ ಪ್ರಯಾಣ ನಿರ್ಬಂಧಗಳನ್ನು ವಿಧಿಸಿರುವ ಪಶ್ಚಿಮ ಆಫ್ರಿಕಾದ ರಾಷ್ಟ್ರಗಳು, ದೇಶದ ಅಧ್ಯಕ್ಷ ಮೊಹಮದ್ ಬಜೌಮ್ ಅವರನ್ನು ಒಪ್ಪಿಸಲು ಒಂದು ವಾರದ ಗಡುವು ನೀಡಿವೆ. ಈ ಗಡುವಿಗೆ ತಪ್ಪಿದಲ್ಲಿ ಸೇನಾ ಬಲ ಪ್ರಯೋಗಿಸಲಾಗುವುದು ಎಂದು ಎಚ್ಚರಿಕೆ ನೀಡಿವೆ.
ಕಳೆದ ಬುಧವಾರ ಪಶ್ಚಿಮ ಆಫ್ರಿಕಾದ ದೇಶವಾದ ನೈಜರ್ ಸೇನೆ ತನ್ನ ದೇಶದ ಅಧ್ಯಕ್ಷ ಮೊಹಮದ್ ಬಜೌಮ್ ಅವರನ್ನು ಬಂಧಿಸಿತ್ತು. ಹಲವು ವರ್ಷಗಳಲ್ಲಿ ಸಹೇಲಿಯನ್ ನಾಯಕನನ್ನು ಪದಚ್ಯುತಗೊಳಿಸುವ ಮೂರನೇ ಪ್ರಯತ್ನದಲ್ಲಿ ಮಿಲಿಟರಿ ಬುಧವಾರದಿಂದ ನೈಜರ್‌ನ ಚುನಾಯಿತ ಅಧ್ಯಕ್ಷ ಬಜೌಮ್ ಅವರನ್ನು ತನ್ನ ವಶದಲ್ಲಿಟ್ಟುಕೊಂಡಿದೆ. ಸರ್ಕಾರ ಪತನಗೊಳಿಸಲಾಗಿದೆ ಎಂದು ಹೇಳಿಕೊಂಡಿದ್ದ ಕಮಾಂಡರ್ ಜನರಲ್ ಅಬ್ದೌರಹ್ಮನೆ ಟಿಯಾನಿ ಸ್ವತಃ ತಾನೇ ನಾಯಕ ಎಂದು ಘೋಷಿಸಿಕೊಂಡಿದ್ದಾರೆ. ಸದ್ಯ ನೈಜರ್‌ನ ಅಧಿಕಾರವನ್ನು ಸೈನಿಕರು ವಶಪಡಿಸಿಕೊಂಡಿದ್ದಾರೆ.
15 ರಾಷ್ಟ್ರಗಳ ಪಶ್ಚಿಮ ಆಫ್ರಿಕಾದ ರಾಜ್ಯಗಳ ಆರ್ಥಿಕ ಸಮುದಾಯ (ECOWAS) ಪ್ರಾದೇಶಿಕ ಬ್ಲಾಕ್ ಭಾನುವಾರ ನೈಜೀರಿಯಾದಲ್ಲಿ ನಡೆಸಿದ ತುರ್ತು ಸಮ್ಮೇಳನದಲ್ಲಿ ಬಜೌಮ್ ಅವರನ್ನು ಒಂದು ವಾರದೊಳಗೆ ಮರು ಒಪ್ಪಿಸುವಂತೆ ಕೇಳಿದೆ. ಒಂದು ವೇಳೆ ಒಪ್ಪಿಸದೇ ಇದ್ದರೆ, ಕಾನೂನಿನ ಆಳ್ವಿಕೆಯನ್ನು ಮರುಸ್ಥಾಪಿಸಲು "ಎಲ್ಲ ಕ್ರಮಗಳನ್ನು" ಬಳಸುವುದಾಗಿ ಬ್ಲಾಕ್ ಎಚ್ಚರಿಕೆ ನೀಡಿದೆ.