ಕೊಲಂಬೊ(ಶ್ರೀಲಂಕಾ):ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾ ನಿರ್ಬಂಧದ ಹೊರತಾಗಿಯೂ ರಷ್ಯಾದಿಂದ ತೈಲ ಆಮದಿಗೆ ಮುಂದಾಗಿದೆ. ಈ ಬಗ್ಗೆ ನೂತನ ಪ್ರಧಾನಿ ರನಿಲ್ ವಿಕ್ರಮಸಿಂಘೆ ಹೇಳಿಕೆ ನೀಡಿದ್ದು, ಇಂಧನ ಕೊರತೆ ನೀಗಿಸಲು ರಷ್ಯಾದಿಂದಲೂ ತೈಲ ಆಮದು ಮಾಡಿಕೊಳ್ಳಲು ದೇಶ ಮುಕ್ತವಾಗಿದೆ ಎಂದಿದ್ದಾರೆ.
ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾದ ಮೇಲೆ ಪಾಶ್ಚಿಮಾತ್ಯ ರಾಷ್ಟ್ರಗಳು ಹಲವು ಕ್ಷೇತ್ರಗಳಲ್ಲಿ ನಿರ್ಬಂಧ ವಿಧಿಸಿ ಆ ದೇಶದೊಂದಿಗೆ ವ್ಯಾಪಾರ ವಹಿವಾಟನ್ನು ನಿಲ್ಲಿಸಿವೆ. ಇದಲ್ಲದೇ ಇತರೆ ರಾಷ್ಟ್ರಗಳು ಕೂಡ ರಷ್ಯಾದ ಜೊತೆಗೆ ವ್ಯಾಪಾರ ನಡೆಸದಂತೆ ಕರೆ ನೀಡಿವೆ. ಈ ಮಧ್ಯೆ ಶ್ರೀಲಂಕಾ ತನ್ನ ದೇಶದಲ್ಲಿನ ಇಂಧನ ಕೊರತೆ ಮತ್ತು ಹಾಹಾಕಾರವನ್ನು ತಗ್ಗಿಸಲು ರಷ್ಯಾದ ಜೊತೆ ತೈಲ ಒಪ್ಪಂದಕ್ಕೆ ಸಜ್ಜಾಗಿದೆ.
ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ, ದೇಶದ ಮೇಲೆ ಹೆಚ್ಚುತ್ತಿರುವ ಸಾಲದ ಹೊರೆಯ ಮಧ್ಯೆಯೂ ಚೀನಾದಿಂದ ಇನ್ನೂ ಹೆಚ್ಚಿನ ಹಣಕಾಸಿನ ನೆರವನ್ನು ಪಡೆಯುವ ಅಗತ್ಯವಿದೆ. ಉಕ್ರೇನ್- ರಷ್ಯಾ ಯುದ್ಧ ಹಲವು ರಾಷ್ಟ್ರಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಯುದ್ಧವು ಆರ್ಥಿಕ ಸ್ಥಿತಿಯನ್ನು ಹದಗೆಡಿಸಿದೆ.
2024 ರವರೆಗೆ ಭೀಕರ ಆಹಾರದ ಕೊರತೆ ಕಾಣಿಸಬಹುದು. ರಷ್ಯಾ ಶ್ರೀಲಂಕಾಕ್ಕೆ ಗೋಧಿಯನ್ನು ನೀಡಿ ನೆರವಾಗಿದೆ. ಶ್ರೀಲಂಕಾದಲ್ಲಿ ಇಂಧನ ಕೊರತೆ ಮಿತಿ ಮೀರಿದೆ. ಇರಾನ್ ಜೊತೆ ತೈಲ ಒಪ್ಪಂದ ಮಾಡಿಕೊಂಡು ಆಮದಿಗಾಗಿ ಚರ್ಚೆಗಳು ನಡೆಯುತ್ತಿವೆ. ರಷ್ಯಾದಿಂದಲೂ ತೈಲ ಖರೀದಿಗೆ ನಾವು ಮುಕ್ತವಾಗಿದ್ದೇವೆ ಎಂದು ಅವರು ಹೇಳಿದ್ದಾರೆ.
ಓದಿ:ಬಹುಭಾಷಾ ನಿರ್ಣಯ ಅಂಗೀಕರಿಸಿದ ವಿಶ್ವಸಂಸ್ಥೆ.. ಭಾರತದ 'ಹಿಂದಿ'ಗೂ ಸಿಕ್ತು ಸ್ಥಾನ