ಚಾಸಿವ್ ಯಾರ್ (ಉಕ್ರೇನ್): ರಷ್ಯಾದ ರಾಕೆಟ್ ದಾಳಿಯ ಪರಿಣಾಮ ಪೂರ್ವ ಉಕ್ರೇನ್‌ನಲ್ಲಿ ಅಪಾರ್ಟ್ಮೆಂಟ್ಗಳು ಗಡ ಗಡ ಎಂದು ನಡುಗಿವೆ. ಇದರಲ್ಲಿ ಕನಿಷ್ಠ 15 ಜನರು ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಹತ್ತಾರು ಉಕ್ರೇನಿಯನ್ ತುರ್ತು ಕಾರ್ಯಕರ್ತರು ಅವಶೇಷಗಳ ಅಡಿ ಸಿಲುಕಿ ಸಾವಿಗೀಡಾದವರನ್ನು ಹೊರತೆಗೆಯಲು ಶ್ರಮಿಸಿದ್ದಾರೆ.
ಈ ಘಟನೆಯಲ್ಲಿ ಇನ್ನೂ 20ಕ್ಕೂ ಹೆಚ್ಚು ಮಂದಿ ಸಿಕ್ಕಿಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ. ಶನಿವಾರ ತಡರಾತ್ರಿ ನಡೆದ ದಾಳಿಯು ಚಾಸಿವ್ ಯಾರ್ ಪಟ್ಟಣದ ವಸತಿ ಕ್ವಾರ್ಟರ್‌ನಲ್ಲಿ ಮೂರು ಕಟ್ಟಡಗಳನ್ನು ನಾಶಪಡಿಸಿದೆ. ಇಲ್ಲಿ ಹೆಚ್ಚಾಗಿ ಹತ್ತಿರದ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಜನರು ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಇನ್ನು ಭಾನುವಾರ ಸಂಜೆ ಸುಮಾರು 24 ಗಂಟೆಗಳ ಕಾಲ ಅಲ್ಲೇ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸಲು ರಕ್ಷಕರು ಸಾಕಷ್ಟು ಶ್ರಮ ಪಟ್ಟರು ನಂತರ ಅವನನ್ನು ಸ್ಟ್ರೆಚರ್‌ನಲ್ಲಿ ಮಲಗಿಸಿ ತ್ವರಿತವಾಗಿ ಆಸ್ಪತ್ರೆಗೆ ರವಾನಿಸಿದ್ದರು. ಇದರ ಬೆನ್ನಲ್ಲೇ ಉಕ್ರೇನ್‌ನ ತುರ್ತು ಸೇವೆ ಮೂಲಕ ಅವಶೇಷಗಳಿಂದ ಆರು ಶವಗಳನ್ನು ಹೊರಕ್ಕೆ ತರಲಾಗಿದೆ. ಇದಕ್ಕೂ ಮೊದಲು ಅವಶೇಷಗಳ ಕೆಳಗೆ ಜೀವಂತವಾಗಿ ಸಿಕ್ಕಿಬಿದ್ದಿದ್ದ ಮೂವರನ್ನು ಹೊರ ತಂದಿದ್ದರು.
ಗೋಡೆಗಳು ಸಂಪೂರ್ಣವಾಗಿ ನಾಶ: ಡೊನೆಟ್ಸ್ಕ್ ಪ್ರದೇಶದ ಗವರ್ನರ್ ಪಾವ್ಲೋ ಕೈರಿಲೆಂಕೊ ಈ ಸಂಬಂಧ ಪ್ರತಿಕ್ರಿಯಿಸಿ, 9 ವರ್ಷದ ಮಗು ಸೇರಿದಂತೆ ಅಂದಾಜು 24 ಜನರು ಇನ್ನೂ ಸಿಕ್ಕಿಬಿದ್ದಿದ್ದಾರೆ ಎಂದು ಊಹಿಸಲಾಗಿದೆ. ಇಲ್ಲಿ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಲು ಕ್ರೇನ್‌ಗಳು ಮತ್ತು ಅಗೆಯುವವರು ರಕ್ಷಣಾ ತಂಡಗಳು ಬಳಕೆ ಮಾಡಿಕೊಂಡಿವೆ. ದಾಳಿಯಿಂದ ಅದರ ಗೋಡೆಗಳು ಸಂಪೂರ್ಣವಾಗಿ ಇಬ್ಭಾಗವಾಗಿವೆ. ಅಪಾಯಕಾರಿ ಪರಿಸ್ಥಿತಿಯ ನಡುವೆಯೂ ಅದರಲ್ಲೂ ಮಳೆಯ ನಡುವೆಯೂ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಹಾರಿಸಲಾದ ಉರಾಗನ್ ರಾಕೆಟ್‌ಗಳಿಂದ ಸುಮಾರು 12,000 ಜನರಿದ್ದ ಪಟ್ಟಣ ನಾಶವಾಗಿದೆ. ಚಾಸಿವ್ ಯಾರ್ ಕ್ರಾಮಾಟೋರ್ಸ್ಕ್‌ನ ಆಗ್ನೇಯಕ್ಕೆ 20 ಕಿಲೋಮೀಟರ್ (12 ಮೈಲಿಗಳು) ದೂರದಲ್ಲಿದೆ, ಇದು ರಷ್ಯಾದ ಪಡೆಗಳು ಪಶ್ಚಿಮಕ್ಕೆ ದಾಳಿ ಇಡುವ ವೇಳೆ ಪ್ರಮುಖ ಗುರಿಯಾಗಿದೆ ಎಂದು ವಿವರಿಸಿದ್ದಾರೆ.