ಸಿಂಗಾಪುರ: ಶ್ರೀಲಂಕಾದ ಮಾಜಿ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರನ್ನು ಯುದ್ಧಾಪರಾಧಗಳ ಆರೋಪದಲ್ಲಿ ಬಂಧಿಸುವಂತೆ ದಕ್ಷಿಣ ಆಫ್ರಿಕಾ ಮೂಲದ ಮಾನವ ಹಕ್ಕುಗಳ ಸಂಘಟನೆಯೊಂದು ಸಿಂಗಾಪುರದ ಅಟಾರ್ನಿ ಜನರಲ್ರಿಗೆ ಕ್ರಿಮಿನಲ್ ದೂರು ಸಲ್ಲಿಸಿದೆ.
ಇಂಟರ್‌ನ್ಯಾಶನಲ್ ಟ್ರೂತ್ ಅಂಡ್ ಜಸ್ಟಿಸ್ ಪ್ರಾಜೆಕ್ಟ್ (ಐಟಿಜೆಪಿ) ಸಂಘಟನೆಯ ವಕೀಲರು 63 ಪುಟಗಳ ದೂರನ್ನು ಸಲ್ಲಿಸಿದ್ದು, ರಾಜಪಕ್ಸ ಅವರು ರಕ್ಷಣಾ ಕಾರ್ಯದರ್ಶಿಯಾಗಿದ್ದಾಗ, 2009 ರ ಅಂತರ್ಯುದ್ಧದ ಸಮಯದಲ್ಲಿ ಜಿನೀವಾ ಒಪ್ಪಂದಗಳ ಗಂಭೀರ ಉಲ್ಲಂಘನೆ ಮಾಡಿದ್ದಾರೆ ಮತ್ತು ಇವು ಸಾರ್ವತ್ರಿಕ ನ್ಯಾಯವ್ಯಾಪ್ತಿಯ ಅಡಿಯಲ್ಲಿ ಸಿಂಗಾಪುರದ ಆಂತರಿಕ ಕಾನೂನುಗಳ ಪ್ರಕಾರ ಕ್ರಮ ಜರುಗಿಸಬಹುದಾದ ಅಪರಾಧಗಳಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಶ್ರೀಲಂಕಾದಲ್ಲಿ ನಡೆದ ಅಂತರ್ಯುದ್ಧದ ಸಂದರ್ಭದಲ್ಲಿ ಗೋಟಬಯ ರಾಜಪಕ್ಸ, ಅಂತಾರಾಷ್ಟ್ರೀಯ ಮಾನಹ ಹಕ್ಕುಗಳ ಕಾನೂನು ಮತ್ತು ಅಂತಾರಾಷ್ಟ್ರೀಯ ಯುದ್ಧಾಪರಾಧ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
"ಕೊಲೆ, ಮರಣದಂಡನೆ, ಚಿತ್ರಹಿಂಸೆ, ಅಮಾನವೀಯ ವರ್ತನೆ, ಅತ್ಯಾಚಾರ ಮತ್ತು ಇತರ ರೀತಿಯ ಲೈಂಗಿಕ ಹಿಂಸೆ, ಜೀತ, ತೀವ್ರ ದೈಹಿಕ, ಮಾನಸಿಕ ಹಿಂಸೆ ಮತ್ತು ಹಸಿವು ಇವುಗಳಲ್ಲಿ ಸೇರಿವೆ" ಎಂದು ಐಟಿಜೆಪಿ ಹೇಳಿಕೆಯಲ್ಲಿ ತಿಳಿಸಿದೆ.
ರಾಜಪಕ್ಸ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ ಜುಲೈ ತಿಂಗಳ ಮಧ್ಯಭಾಗದಲ್ಲಿ ಮಾಲ್ಡೀವ್ಸ್‌ಗೆ ತೆರಳಿ ಅಲ್ಲಿಂದ ಸಿಂಗಾಪುರಕ್ಕೆ ಪಲಾಯನ ಮಾಡಿದ್ದರು. ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರವಾಗಿದ್ದು, ದೇಶದಲ್ಲಿ ಅಶಾಂತಿ ಉಂಟಾಗಿದೆ. ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರನಿಲ್ ವಿಕ್ರಮಸಿಂಘೆ ಇತ್ತೀಚೆಗೆ ಆಯ್ಕೆಯಾಗಿದ್ದಾರೆ.