ವಾಷಿಂಗ್ಟನ್:ವಿದೇಶಗಳಿಗೆ ಪಯಣಿಸಲು ಅಗತ್ಯವಿರುವ ವೀಸಾ ಪಡೆಯುವ ಪ್ರಕ್ರಿಯೆ ತೀರಾ ಮಂದಗತಿಯಲ್ಲಿದೆ. ಅಮೆರಿಕದ ಸಂದರ್ಶಕರ ವೀಸಾ ಪಡೆಯುವಿಕೆಯ ಕಾಯುವಿಕೆ ಈಗ ತಗ್ಗಿದೆ. ಈ ವರ್ಷ ಅಧಿಕಾರಿಗಳ ಹೆಚ್ಚಳ, ಕಾನ್ಸುಲೇಟ್ ಆರಂಭದಿಂದಾಗಿ ಶೇಕಡಾ 60 ರಷ್ಟು ಸಮಯ ಇಳಿಕೆಯಾಗಿದೆ.
ವೀಸಾ ಸೇವೆಗಳ ಉಪ ಸಹಾಯಕ ರಾಜ್ಯ ಕಾರ್ಯದರ್ಶಿ ಜೂಲಿ ಸ್ಟಫ್ಟ್ ಅವರು ಮಂಗಳವಾರ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, "ಈ ವರ್ಷ 1 ಮಿಲಿಯನ್ ವೀಸಾಗಳನ್ನು ನೀಡಲಾಗಿದೆ. ಇದು ಕೊರೊನಾ ಸಾಂಕ್ರಾಮಿಕ ಪೂರ್ವ ಸಂಖ್ಯೆಗಿಂತ ಹೆಚ್ಚಾಗಿದೆ. ಬ್ಯುಸಿನೆಸ್ ಮತ್ತು ಪ್ರಯಾಣಿಕ ವೀಸಾಕ್ಕಾಗಿ ಇನ್ನು ಮುಂದೆ ಕಾಯುವ ಅಗತ್ಯವಿಲ್ಲ" ಎಂದು ತಿಳಿಸಿದರು.
"ವೀಸಾ ಶೀಘ್ರ ನೀಡಿಕೆಗಾಗಿ ಭಾರತದಲ್ಲಿ ಹೆಚ್ಚಿನ ಅಧಿಕಾರಿಗಳನ್ನು ನೇಮಿಸಿದೆವು. ಹೈದರಾಬಾದ್ನಲ್ಲಿ ಹೊಸ ಕಾನ್ಸುಲೇಟ್ ಆರಂಭಿಸಿದೆವು. ಬ್ಯಾಂಕಾಕ್ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳಿಗೆ ಪಯಣಿಸಲು ವೀಸಾಕ್ಕಾಗಿ ಕಾಯುತ್ತಿರುವ ಜನರಿಗೆ ಕಡಿಮೆ ಅವಧಿಯಲ್ಲಿ ವೀಸಾ ನೀಡಲಾಯಿತು" ಎಂದು ಹೇಳಿದರು.
"ಫ್ರಾಂಕ್‌ಫರ್ಟ್, ಲಂಡನ್ ಮತ್ತು ಅಬು ಧಾಬಿ ವೀಸಾಗಳನ್ನು ಸಾಕಷ್ಟು ಭಾರತೀಯರು ಪಡೆದುಕೊಂಡಿದ್ದಾರೆ. 100ಕ್ಕೂ ಹೆಚ್ಚು ಅಮೆರಿಕದ ರಾಜತಾಂತ್ರಿಕ ತಂಡಗಳ ಸದಸ್ಯರು ಭಾರತೀಯರಿಗೆ ವೀಸಾಗಳನ್ನು ನೀಡುತ್ತಿದ್ದಾರೆ. ಈ ಎಲ್ಲಾ ಪ್ರಯತ್ನಗಳ ಪರಿಣಾಮವಾಗಿ ವೀಸಾ ಸಂದರ್ಶನಕ್ಕಾಗಿ ಕಾಯುವ ಸಮಯವು ಕಳೆದ ಎರಡು ತಿಂಗಳಲ್ಲಿ ಶೇಕಡಾ 60 ರಷ್ಟು ಕಡಿಮೆಯಾಗಿದೆ. ಇದು ಅವಿರತ ಶ್ರಮದ ಫಲಿತಾಂಶ" ಎಂದು ಮಾಹಿತಿ ನೀಡಿದರು.
"ಕೊರೊನಾ ಸಾಂಕ್ರಾಮಿಕದ ಬಳಿಕ ವೀಸಾ ಬೇಡಿಕೆ ಹೆಚ್ಚಾಗಿದೆ. ಶೇಕಡಾ 40 ರಷ್ಟು ಏರಿಕೆ ಕಂಡಿದೆ. ಇದರಿಂದ ವೀಸಾ ಸಿಗುವ ಅವಧಿಯೂ ವಿಳಂಬವಾಗಿದೆ. ಕಾಯುವ ಸಮಯವನ್ನು ಕಡಿಮೆ ಮಾಡಲು ವಿದೇಶಾಂಗ ಇಲಾಖೆ ಶ್ರಮಿಸುತ್ತಿದೆ. ಭಾರತದಲ್ಲಿ ಫೆಬ್ರವರಿಯಲ್ಲಿ ಅತಿ ಹೆಚ್ಚು ವೀಸಾಗಳನ್ನು ನೀಡಲಾಗಿದೆ. ದಾಖಲೆಯ 1 ಮಿಲಿಯನ್ ವೀಸಾ ನೀಡುವ ಗುರಿಯನ್ನು ಸಾಧಿಸಲಾಗಿದೆ. ಪ್ರವಾಸಿ ವೀಸಾದ ಜೊತೆಗೆ ಅಮೆರಿಕದ ಸಿಬ್ಬಂದಿ ವಿದ್ಯಾರ್ಥಿ ವೀಸಾ, ಬ್ಯುಸಿನೆಸ್ ವೀಸಾ ಸೇರಿದಂತೆ ಹಲವು ರೀತಿಯ ವೀಸಾಗಳ ನೀಡಿಕೆಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ" ಎಂದು ಸ್ಟಫ್ಟ್ ಹೇಳಿದರು.
ಬೆಂಗಳೂರಿನಲ್ಲಿ ವೀಸಾ ಕಚೇರಿ ಆರಂಭಿಸಿ:ಬೆಂಗಳೂರಿನಲ್ಲಿ ಅಮೆರಿಕ ವೀಸಾ ಕಚೇರಿ ತೆರೆಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಅಮೆರಿಕದ ರಾಯಭಾರಿ ಎಲಿಜೆಬೆತ್ ಜೋನ್ಸ್ ಹಾಗೂ ಚೆನ್ನೈನಲ್ಲಿರುವ ಕಾನ್ಸುಲ್ ಜನರಲ್ ಜೂಡಿತ್ ರೇವಿನ್ ಅವರಿಗೆ ಸಿಎಂ ಮನವಿ ಮಾಡಿದ್ದರು. ಈಚೆಗೆ ಅಮೆರಿಕ ರಾಯಭಾರಿಗಳನ್ನು ಭೇಟಿ ಮಾಡಿದ್ದ ಈ ವಿಷಯವನ್ನು ಸಿಎಂ ಪ್ರಸ್ತಾಪಿಸಿದ್ದರು.
ವೀಸಾ ಕಚೇರಿ ಚೆನ್ನೈನಲ್ಲಿರುವುದರಿಂದ ಬೆಂಗಳೂರಿನಿಂದ ಅಮೆರಿಕಕ್ಕೆ ಪ್ರಯಾಣಿಸುವವರಿಗೆ ತೊಂದರೆಯಾಗುತ್ತಿದೆ. ಪ್ರತಿನಿತ್ಯ ವಿದೇಶಿಗರು ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಜನ ಅಮೆರಿಕಕ್ಕೆ ಪ್ರಯಾಣ ಬೆಳೆಸುವುದರಿಂದ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಬೆಂಗಳೂರಿನಲ್ಲಿ ವೀಸಾ ಕಚೇರಿಯನ್ನು ತೆರೆಯುವಂತೆ ಒತ್ತಾಯಿಸಿದ್ದಾರೆ .
ಹೊಸ ನೀತಿಯಿಂದ ತೊಂದರೆ:ಅಮೆರಿಕ ತನ್ನ ದೇಶೀಯ ಕಾರ್ಮಿಕರನ್ನು ರಕ್ಷಿಸಲು, ಎಚ್ -1 ಬಿ ವಲಸೆ ರಹಿತ ವೀಸಾ ಪ್ರೋಗ್ರಾಂ ಮೇಲೆ ಹೊಸ ನಿರ್ಬಂಧಗಳನ್ನು ಘೋಷಿಸಿದ್ದು, ಇದು ನುರಿತ ಪ್ರತಿಭಾವಂತರ ಪ್ರವೇಶವನ್ನು ತಡೆಯಲಿದೆ ಎಂದು ಹೇಳಲಾಗಿದೆ. ಹೊಸ ಎಚ್ -1 ಬಿ ವೀಸಾ ಪ್ರೋಗ್ರಾಂಗೆ ಸಂಬಂಧಿಸಿದಂತೆ ಮಾಡಲಾದ ಬದಲಾವಣೆಗಳು ಪ್ರತಿಭಾವಂತರ ಪ್ರವೇಶವನ್ನು ನಿರ್ಬಂಧಿಸುವುದರ ಜೊತೆಗೆ ಅಮೆರಿಕದ ಆರ್ಥಿಕತೆ ಮತ್ತು ಉದ್ಯೋಗಗಳಿಗೆ ಹಾನಿಯನ್ನುಂಟು ಮಾಡುತ್ತದೆ ಎಂದು ಕೈಗಾರಿಕಾ ಸಂಸ್ಥೆ ನಾಸ್ಕಾಮ್ ಎಚ್ಚರಿಸಿದೆ.
ಇದನ್ನೂ ಓದಿ:20 ರಾಜ್ಯಗಳ 76 ಔಷಧ ತಯಾರಕರ ಮೇಲೆ ಡಿಸಿಜಿಐ ದಾಳಿ: 18 ಕಂಪನಿಗಳ ಲೈಸನ್ಸ್ ರದ್ದು