ಮಾಸ್ಕೋ (ರಷ್ಯಾ) :ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧವೇ ಯುದ್ಧಭೂಮಿಯಲ್ಲಿ ಬಂಡಾಯವೆದ್ದಿದ್ದ ಖಾಸಗಿ ಪಡೆ 'ವ್ಯಾಗ್ನರ್' ನಾಯಕ ಯೆವ್ಗನಿ ಪ್ರಿಗೊಜಿನ್ ರಾಜಧಾನಿ ಮಾಸ್ಕೋದ ಉತ್ತರಭಾಗದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಜೊತೆಗೆ ದುರಂತದಲ್ಲಿ 9 ಇತರ ಮಂದಿಯೂ ಪ್ರಾಣ ಕಳೆದುಕೊಂಡಿದ್ದಾಗಿ ರಷ್ಯಾ ತಿಳಿಸಿದೆ.
ಖಾಸಗಿ ಜೆಟ್ ಮಾಸ್ಕೋದಿಂದ ಸೇಂಟ್ ಪೀಟರ್ಸ್ಬರ್ಗ್ಗೆ ತೆರಳುವಾಗ ರಾಜಧಾನಿಯಿಂದ 100 ಕಿಮೀ ದೂರದಲ್ಲಿ ಪತನವಾಗಿದೆ. ವಿಮಾನ ಪತನಕ್ಕೆ ಕಾರಣ ತಿಳಿದುಬಂದಿಲ್ಲವಾದರೂ, ಅದರಲ್ಲಿ ಮೂವರು ಸಿಬ್ಬಂದಿ, ಯೆವ್ಗನಿ ಪ್ರಿಗೊಜಿನ್ ಮತ್ತು 6 ಪ್ರಯಾಣಿಕರು ಸಾವಿಗೀಡಾಗಿದ್ದಾರೆ ಎಂದು ರಷ್ಯಾ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ಪುಟಿನ್ ವಿರುದ್ಧ ಪ್ರಿಗೊಜಿನ್ ಬಂಡಾಯ:ವ್ಲಾಡಿಮಿರ್ ಪುಟಿನ್ ಆಪ್ತನಾಗಿದ್ದ ಪ್ರಿಗೊಜಿನ್ ಯುದ್ಧಭೂಮಿಯಲ್ಲಿ ತನ್ನ ಪಡೆಗಳಿಗೆ ಸೌಲಭ್ಯಗಳನ್ನು ನೀಡದೇ ಹೋರಾಡಲು ಸೂಚಿಸಲಾಗುತ್ತಿದೆ ಎಂಬ ಕಾರಣಕ್ಕಾಗಿ ಬಂಡಾಯವೆದ್ದು, ರಷ್ಯಾ ಸೇನೆಯ ವಿರುದ್ಧ ಮಾಡುವುದಾಗಿ ಘೋಷಿಸಿದ್ದ. ಉಕ್ರೇನ್ ಯುದ್ಧ ಪುಟಿನ್ ಪ್ರತಿಷ್ಠೆಯಾಗಿದ್ದ ಕಾರಣ ಆಪ್ತನನ್ನು ಬಂಧಿಸಲು ಸೂಚಿಸಿದ್ದರು. ಪ್ರಿಗೋಜಿನ್ ರಷ್ಯಾದ ಮಿಲಿಟರಿಯ ವಿರುದ್ಧ ದಂಗೆ ಎದ್ದ ಬಳಿಕ ಪುಟಿನ್ ಇದನ್ನು ದೇಶದ್ರೋಹ ಮತ್ತು ಬೆನ್ನಿಗೆ ಚೂರಿ ಹಾಕಿದಂತೆ ಎಂದು ಖಂಡಿಸಿದ್ದರು. ಅಲ್ಲದೇ, ಇದರ ವಿರುದ್ಧ ಕಠಿಣ ಕ್ರಮ ಖಂಡಿತ ಎಂದು ಕೆಂಡವಾಗಿದ್ದರು.