ಬೆಂಗಳೂರು : ರಷ್ಯಾದಲ್ಲಿ ನಡೆದ ಅಸಾಧಾರಣ ಘಟನಾವಳಿಯೊಂದರಲ್ಲಿ ವ್ಯಾಗ್ನರ್ ಖಾಸಗಿ ಸೇನಾಪಡೆ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್, ರಷ್ಯಾ ರಾಜಧಾನಿ ಮಾಸ್ಕೊ ಕಡೆಗೆ ನಡೆಯುವಂತೆ ತನ್ನ ಸಶಸ್ತ್ರ ಮಿಲಿಟರಿ ಪಡೆಗೆ ಆದೇಶಿಸಿದ್ದರು. ತನ್ನ ಸೇನಾಪಡೆಯ ಯೋಧರನ್ನು ಕೊಂದ ರಷ್ಯಾದ ವಿರುದ್ಧ ಸೇಡು ತೀರಿಸಿಕೊಳ್ಳಲು ತಾವು ಹೀಗೆ ಮಾಡುತ್ತಿರುವುದಾಗಿ ಪ್ರಿಗೊಜಿನ್ ಹೇಳಿದ್ದರು. ಇದು ಇತ್ತೀಚಿನ ದಶಕಗಳಲ್ಲಿ ರಷ್ಯಾದಲ್ಲಿ ಸಂಭವಿಸಬಹುದಾಗಿದ್ದ ಭಾರಿ ದೊಡ್ಡ ಆಂತರಿಕ ದಂಗೆಗೆ ಮುನ್ಸೂಚನೆಯಾಗಿತ್ತು. ಆದರೆ ಬೆಲಾರುಸ್ ಅಧ್ಯಕ್ಷರ ಮಧ್ಯಸ್ಥಿಕೆಯಿಂದಾಗಿ ಪ್ರಿಗೊಜಿನ್ ತನ್ನ ಸೇನಾಪಡೆಯನ್ನು ಹಿಂದೆ ಕರೆಸಿಕೊಂಡಿದ್ದಾರೆ. 24 ಗಂಟೆಗಳಲ್ಲಿ ಇಷ್ಟೆಲ್ಲ ನಡೆದುಹೋಗಿದೆ.
ವಿಶ್ವದ ಬಲಿಷ್ಠ ರಾಷ್ಟ್ರವಾಗಿರುವ ಹಾಗೂ ಅತಿದೊಡ್ಡ ಸೇನಾಪಡೆಯನ್ನು ಹೊಂದಿರುವ ರಷ್ಯಾದ ಅಧ್ಯಕ್ಷ ಪುಟಿನ್ ಅವರೇ ಬೆದರುವಂತೆ ಮಾಡಿದ ಈ ಯೆವ್ಗೆನಿ ಪ್ರಿಗೊಜಿನ್ ಯಾರು ಎಂಬ ಕುತೂಹಲ ಈಗ ವಿಶ್ವದಲ್ಲಿ ಮೂಡಿದೆ. ಯೆವ್ಗೆನಿ ಪ್ರಿಗೊಜಿನ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಯೆವ್ಗೆನಿ ಪ್ರಿಗೋಜಿನ್ ಯಾರು?: ಈಗ ಮಾಸ್ಕೋ ವಿರುದ್ಧ ತಿರುಗಿ ಬಿದ್ದಿರುವ ಪ್ರಿಗೊಜಿನ್ ಮಾಜಿ ಅಪರಾಧಿ ಮತ್ತು ಒಂದು ಕಾಲದಲ್ಲಿ ತಿಂಡಿ ತಿನಿಸು ಮಾರುವ ವ್ಯಕ್ತಿಯಾಗಿದ್ದ. ಈತ ತನ್ನ ನಿರ್ದಯತೆ, ಹಿಂಸೆ ಮತ್ತು ಕ್ರೌರ್ಯಕ್ಕೆ ಕುಖ್ಯಾತನಾಗಿದ್ದಾನೆ. 1961 ರಲ್ಲಿ ಸೇಂಟ್ ಪೀಟರ್ಸ್ ಬರ್ಗ್ನಲ್ಲಿ ಜನಿಸಿದ ಈತ ಆರಂಭದಲ್ಲಿ ಕ್ರೀಡಾ ಅಕಾಡೆಮಿಯ ವಿದ್ಯಾರ್ಥಿಯಾಗಿದ್ದ. ಆದರೆ ಚಿಕ್ಕವನಿರುವಾಗಲೇ ಸಣ್ಣ ಪುಟ್ಟ ಅಪರಾಧಿಗಳೊಂದಿಗೆ ಗೆಳೆತನ ಬೆಳೆಸಿಕೊಂಡಿದ್ದ. 1980 ರಲ್ಲಿ ಹಲವಾರು ಹಿಂಸಾತ್ಮಕ ದರೋಡೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಈತ ತಮ್ಮ 20 ರ ಹರೆಯದಲ್ಲಿ ಹೆಚ್ಚಿನ ಸಮಯವನ್ನು ಜೈಲಿನಲ್ಲಿಯೇ ಕಳೆದ.
1990 ರಲ್ಲಿ ಈತ ಜೈಲಿನಿಂದ ಬಿಡುಗಡೆಯಾದಾಗ ಸೋವಿಯತ್ ಒಕ್ಕೂಟವು ಛಿದ್ರವಾಗುವ ಹಂತದಲ್ಲಿತ್ತು. ಆಗ ಆತ ಸಣ್ಣ ಪ್ರಮಾಣದಲ್ಲಿ ತಿಂಡಿ ತಿನಿಸು ಮಾರುತ್ತಿದ್ದ. ಆದರೆ ತುಂಬಾ ಕಡಿಮೆ ಸಮಯದಲ್ಲಿ ಈತ ತನ್ನ ತವರು ನಗರದ ಅತ್ಯುತ್ತಮ ರೆಸ್ಟೋರೆಂಟ್‌ಗಳಲ್ಲಿ ಒಂದಾದ ಸೂಪರ್‌ಮಾರ್ಕೆಟ್ ಚೇನ್ನಲ್ಲಿ ಪಾಲು ಪಡೆದುಕೊಂಡ. ಆಗಲೇ ಆತ ವ್ಲಾಡಿಮಿರ್ ಪುಟಿನ್ ಸೇರಿದಂತೆ ಪ್ರಬಲ ವ್ಯಕ್ತಿಗಳ ನಂಬಿಕೆ ಗಳಿಸಿಕೊಂಡು ಅವರಿಗಾಗಿ ಕೆಲಸ ಮಾಡತೊಡಗಿದ್ದ.
ಪ್ರಿಗೊಝಿನ್ ಉನ್ನತ ಮಟ್ಟದ ಅಧಿಕೃತ ಕಾರ್ಯಕ್ರಮಗಳಿಗೆ ಆಹಾರ ಸರಬರಾಜು ಮಾಡುತ್ತ ಒಂದು ದಶಕಕ್ಕೂ ಹೆಚ್ಚು ಕಾಲ ಕಳೆದ. ಪ್ರಿನ್ಸ್ ಚಾರ್ಲ್ಸ್ ಮತ್ತು ಜಾರ್ಜ್ ಬುಷ್ ಅವರಿಗೂ ಈತ ಸೇವೆ ನೀಡುತ್ತಿರುವ ಕೆಲ ಚಿತ್ರಗಳಲ್ಲಿ ನೋಡಬಹುದು. ಆದರೆ ಸರ್ಕಾರದ ಆಹಾರ ಗುತ್ತಿಗೆಗಳಿಂದ ಈತ ಅತಿ ಬೇಗನೆ ಭಾರಿ ಪ್ರಮಾಣದ ಆಸ್ತಿ ಸಂಪಾದಿಸಿದ.