ಮಾಸ್ಕೋ:ಉಕ್ರೇನ್ ಮೇಲೆ ಯುದ್ಧ ಸಾರಿ ಒಂದು ವರ್ಷ ಸಂಧಿಸುತ್ತಿರುವಾಗಲೇ ಅಮೆರಿಕದ ಜೊತೆ ಮಾಡಿಕೊಂಡಿದ್ದ ಅಣ್ವಸ್ತ್ರ ಒಪ್ಪಂದವನ್ನು ರಷ್ಯಾ ಅಮಾನತು ಮಾಡಿದೆ. ಇದನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸ್ವತಃ ಘೋಷಿಸಿದ್ದಾರೆ. ಅದರಲ್ಲೂ ಜೋ ಬೈಡನ್ ಅವರು ಎರಡು ದಿನಗಳ ಹಿಂದಷ್ಟೇ ಉಕ್ರೇನ್ಗೆ ಭೇಟಿ ನೀಡಿದ ಬೆನ್ನಲ್ಲೇ ಒಪ್ಪಂದವನ್ನು ಸಸ್ಪೆಂಡ್ ಮಾಡಿದ್ದು ಮಹತ್ವ ಪಡೆದುಕೊಂಡಿದೆ.
ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ವ್ಲಾಡಿಮಿರ್ ಪುಟಿನ್ ಅವರು, ಅಮೆರಿಕದೊಂದಿಗೆ ಮಾಡಿಕೊಂಡಿದ್ದ ಅಣ್ವಸ್ತ್ರ ಒಪ್ಪಂದವನ್ನು ಸದ್ಯಕ್ಕೆ ಅಮಾನತು ಮಾಡಲಾಗುವುದು. ನಾವು ಅದನ್ನು ರದ್ದು ಮಾಡುತ್ತಿಲ್ಲ. ಇನ್ನೂ ಒಪ್ಪಂದದಿಂದ ಸಂಪೂರ್ಣವಾಗಿ ಹಿಂದೆ ಸರಿದಿಲ್ಲ. ಒಂದು ವೇಳೆ ಅಮೆರಿಕ ಅಣ್ವಸ್ತ್ರ ಪರೀಕ್ಷೆ ನಡೆಸಿದರೆ, ರಷ್ಯಾ ಕೂಡ ದಿಟ್ಟ ನಡೆ ಇಡಲಿದೆ ಎಂದು ಎಚ್ಚರಿಕೆಯ ಮಾತನ್ನಾಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ರಷ್ಯಾದ ಅಸ್ತಿತ್ವಕ್ಕಾಗಿ ಯುದ್ಧ:ಉಕ್ರೇನ್ ಮೇಲಿನ ಯುದ್ಧ ನಮ್ಮ ಸ್ಥಳೀಯ ಸಂಘವರ್ಷವಾಗಿದೆ. ಅದನ್ನು ಪಾಶ್ಚಿಮಾತ್ಯ ಗಣ್ಯರು ಜಾಗತಿಕ ಸಮಸ್ಯೆಯಾಗಿ ಬಿಂಬಿಸಿದ್ದಾರೆ. ತಮ್ಮ ಗುರಿ ಸಾಧನೆಗಾಗಿ ಅವರು ನಮ್ಮ ಮೇಲೆ ಒತ್ತಡ ತರುತ್ತಿದ್ದಾರೆ. ಯುದ್ಧವನ್ನು ಪ್ರಾರಂಭಿಸಿದ್ದೇ ಪಾಶ್ಚಿಮಾತ್ಯ ಗಣ್ಯರು. ಅದನ್ನು ಕೊನೆಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ನಮ್ಮ ಅಸ್ತಿತ್ವಕ್ಕಾಗಿ ಯುದ್ಧ ಮಾಡುತ್ತಿದ್ದೇವೆ ಎಂದು ಪುಟಿನ್ ಹೇಳಿದರು.
ಉಕ್ರೇನ್ ಜನರೊಂದಿಗೆ ನಮ್ಮ ಹೋರಾಟವಿಲ್ಲ. ನಾವು ಅವರೊಂದಿಗೆ ಯುದ್ಧ ಮಾಡುತ್ತಿಲ್ಲ. ಉಕ್ರೇನ್ ಸರ್ಕಾರ ಪಾಶ್ಚಿಮಾತ್ಯ ರಾಷ್ಟ್ರಗಳ ಒತ್ತೆಯಾಳಾಗಿ ಮಾರ್ಪಟ್ಟಿದೆ. ಅವರು ಆ ದೇಶವನ್ನು ಆಕ್ರಮಿಸಿಕೊಂಡಿದ್ದಾರೆ. ಪಾಶ್ಚಿಮಾತ್ಯ ದೇಶಗಳು ರಷ್ಯಾಕ್ಕೆ ಬೆದರಿಕೆ ಹಾಕುತ್ತಿವೆ ಎಂದು ಆರೋಪಿಸಿರುವ ಪುಟಿನ್, ಉಕ್ರೇನ್ ಮೇಲಿನ ಆಕ್ರಮಣವನ್ನು ಸಮರ್ಥಿಸಿಕೊಂಡರು.