ಕರ್ನಾಟಕ

karnataka

ETV Bharat / international

'ಮೇಕ್ ಇನ್ ಇಂಡಿಯಾ' ಉದಾಹರಿಸಿ ಮೋದಿ ನಾಯಕತ್ವ ಕೊಂಡಾಡಿದ ರಷ್ಯಾ ಅಧ್ಯಕ್ಷ ಪುಟಿನ್‌ - ಮೇಕ್ ಇನ್ ಇಂಡಿಯಾ

ರಷ್ಯಾ ನಿರ್ಮಿತ ಕಾರುಗಳ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪುಟಿನ್, ದೇಶೀಯವಾಗಿ ತಯಾರಿಸಿದ ಆಟೋಮೊಬೈಲ್‌ಗಳನ್ನು ಬಳಸಬೇಕು. ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ತನ್ನ ನೀತಿಗಳ ಮೂಲಕ ಈಗಾಗಲೇ ಉದಾಹರಣೆ ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Russian President Vladimir Putin and PM Modi
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಪ್ರಧಾನಿ ಮೋದಿ

By ETV Bharat Karnataka Team

Published : Sep 13, 2023, 10:50 AM IST

ವ್ಲಾಡಿವೋಸ್ಟಾಕ್ (ರಷ್ಯಾ):ರಷ್ಯಾದ ಬಂದರು ಪಟ್ಟಣ ವ್ಲಾಡಿವೋಸ್ಟಾಕ್‌ನಲ್ಲಿ ನಡೆದ 8ನೇ ಈಸ್ಟರ್ನ್ ಎಕನಾಮಿಕ್ ಫೋರಂನಲ್ಲಿ (ಇಇಎಫ್‌) ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಭಾರತದ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿಯವರ ‘ಮೇಕ್ ಇನ್ ಇಂಡಿಯಾ’ ನೀತಿಯನ್ನು ಶ್ಲಾಘಿಸಿದ್ದಾರೆ. ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನು ಉತ್ತೇಜಿಸುವಲ್ಲಿ ಮೋದಿ ಸರಿಯಾದ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ರಷ್ಯಾ ನಿರ್ಮಿತ ಕಾರುಗಳ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪುಟಿನ್, "ನಮ್ಮಲ್ಲಿ ಆಗ (90 ರ ದಶಕದಲ್ಲಿ) ದೇಶೀಯವಾಗಿ ತಯಾರಿಸಿದ ಕಾರುಗಳು ಇರಲಿಲ್ಲ. ಆದರೆ ನಾವು ಈಗ ಉತ್ಪಾದನೆ ಮಾಡುತ್ತಿದ್ದೇವೆ. 1990ರ ದಶಕದಲ್ಲಿ ನಾವು ಅಪಾರ ಪ್ರಮಾಣದಲ್ಲಿ ಖರೀದಿಸಿದ ಮರ್ಸಿಡಿಸ್ ಅಥವಾ ಔಡಿ ಕಾರುಗಳಿಗಿಂತ ಅವು ಹೆಚ್ಚು ಸಾಧಾರಣವಾಗಿ ಕಾಣುತ್ತವೆ ಎಂಬುದು ನಿಜ. ಆದರೆ ಇದು ಸಮಸ್ಯೆ ಅಲ್ಲ. ನಮ್ಮ ಅನೇಕ ಪಾಲುದಾರರನ್ನು ನಾವು ಅನುಕರಿಸಬೇಕು ಎಂದು ನಾನು ಭಾವಿಸುತ್ತೇನೆ. ಉದಾಹರಣೆಗೆ, ಭಾರತ. ಅವರು ಭಾರತೀಯ ನಿರ್ಮಿತ ವಾಹನಗಳ ತಯಾರಿಕೆ ಮತ್ತು ಬಳಕೆಯ ಮೇಲೆ ಕೇಂದ್ರೀಕರಿಸಿದ್ದಾರೆ. ಹಾಗಾಗಿ ನಾವು ರಷ್ಯಾ ನಿರ್ಮಿತ ಆಟೋಮೊಬೈಲ್‌ಗಳನ್ನು ಬಳಸುವುದು ಸೂಕ್ತ" ಎಂದು ಸಲಹೆ ನೀಡಿದರು.

"ನಾವು ರಷ್ಯನ್ ನಿರ್ಮಿತ ವಾಹನಗಳನ್ನು ಹೊಂದಿದ್ದೇವೆ. ಅವುಗಳನ್ನು ಬಳಸಬೇಕು. ಇದು ನಮ್ಮ ಡಬ್ಲ್ಯೂಟಿಒ ಬಾಧ್ಯತೆಗಳ ಯಾವುದೇ ಉಲ್ಲಂಘನೆಗೆ ಕಾರಣವಾಗುವುದಿಲ್ಲ. ಇದು ರಾಜ್ಯದ ಖರೀದಿಗಳಿಗೆ ಸಂಬಂಧಿಸಿದೆ. ದೇಶೀಯವಾಗಿ ತಯಾರಿಸಿದ ವಾಹನಗಳನ್ನು ಬಳಸುವುದು ಉತ್ತಮ. ಈ ವಿಚಾರದಲ್ಲಿ ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತ ಈಗಾಗಲೇ ಉದಾಹರಣೆ ಸ್ಥಾಪಿಸಿದೆ. ಈ ನಿಟ್ಟಿನಲ್ಲಿ ನಾವು ನಮ್ಮ ಅನೇಕ ಪಾಲುದಾರರಿಂದ, ಅದರಲ್ಲಿಯೂ ವಿಶೇಷವಾಗಿ ಭಾರತದಿಂದ ತುಂಬಾ ಕಲಿಯಬೇಕಿದೆ. ಅವರು ಹೆಚ್ಚಾಗಿ ಭಾರತದಲ್ಲೇ ಉತ್ಪಾದಿಸುವ ಕಾರುಗಳ ಬಳಕೆಯ ಮೇಲೆ ಕೇಂದ್ರೀಕರಿಸುತ್ತಿದ್ದಾರೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರ ಮುಖ್ಯವಾಗಿದೆ. ಭಾರತದ ಉತ್ಪನ್ನಗಳನ್ನು ಬಳಸಲು ಜನರನ್ನು ಉತ್ತೇಜಿಸುವ ಮೂಲಕ ಸರಿಯಾದ ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿಯೂ ಅಂತಹ ವಾಹನಗಳು ಲಭ್ಯವಿವೆ" ಎಂದು ಪುಟಿನ್ ವಿವರಿಸಿದರು.

ಕಾರ್ಯಕ್ರಮದಲ್ಲಿ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (IMEC) ಬಗ್ಗೆ ಪತಿಕ್ರಿಯಿಸಿ, "ಐಎಂಇಸಿ ಭಾರತವನ್ನು ಗಲ್ಫ್ ಪ್ರದೇಶಕ್ಕೆ ಸಂಪರ್ಕಿಸುವ ಪೂರ್ವ ಕಾರಿಡಾರ್ ಮತ್ತು ಗಲ್ಫ್ ಪ್ರದೇಶವನ್ನು ಯುರೋಪ್​ಗೆ ಸಂಪರ್ಕಿಸುವ ಉತ್ತರ ಕಾರಿಡಾರ್ ಅನ್ನು ಒಳಗೊಂಡಿದೆ. ಈ ಯೋಜನೆಗೆ ಭಾರತ, ಯುಎಸ್ಎ, ಸೌದಿ ಅರೇಬಿಯಾ, ಯುಎಇ, ಯುರೋಪಿಯನ್ ಯೂನಿಯನ್, ಇಟಲಿ, ಫ್ರಾನ್ಸ್ ಮತ್ತು ಜರ್ಮನಿಗಳು ಸಹಿ ಹಾಕಿವೆ. ಇದು ರಷ್ಯಾಕ್ಕೆ ಲಾಜಿಸ್ಟಿಕ್ಸ್ ಅನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಈ ಯೋಜನೆಯು ಹಲವಾರು ವರ್ಷಗಳಿಂದ ಚರ್ಚೆಯಲ್ಲಿದೆ" ಎಂದರು.

ಇದನ್ನೂ ಓದಿ:ರಷ್ಯಾ ಅಧ್ಯಕ್ಷ ಪುಟಿನ್​ ಬಂಧನದ ಬಗ್ಗೆ ಬ್ರೆಜಿಲ್​ ನ್ಯಾಯಾಂಗ ನಿರ್ಧಾರ: ಬ್ರೆಜಿಲ್ ಅಧ್ಯಕ್ಷ ಲುಲಾ

ABOUT THE AUTHOR

...view details