ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಂಗಳವಾರ ರಾಷ್ಟ್ರವನ್ನುದ್ದೇಶಿಸಿ ತಮ್ಮ ಬಹು ನಿರೀಕ್ಷಿತ ಭಾಷಣ ಮಾಡಲಿದ್ದಾರೆ. ಈ ಭಾಷಣವು ಮುಂದಿನ ವರ್ಷದ ಆಡಳಿತದ ಬಗ್ಗೆ ಮುನ್ಸೂಚನೆ ನೀಡಲಿದೆ ಮತ್ತು ಮತ್ತು ಉಕ್ರೇನ್ ಯುದ್ಧ ಪರಿಸ್ಥಿತಿಯ ಬಗ್ಗೆ ಕ್ರೆಮ್ಲಿನ್ ದೃಷ್ಟಿಕೋನದ ಬಗ್ಗೆ ಬೆಳಕು ಚೆಲ್ಲಲಿದೆ ಎಂದು ನಿರೀಕ್ಷಿಸಲಾಗಿದೆ. ಪುಟಿನ್ ಸಾಂಪ್ರದಾಯಿಕವಾಗಿ ಜನಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳ ದೊಡ್ಡ ಗುಂಪನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಭಾಷಣವನ್ನು ರಷ್ಯಾದ ಎಲ್ಲಾ ಸರ್ಕಾರಿ ಟಿವಿ ಚಾನೆಲ್‌ಗಳು ಪ್ರಸಾರ ಮಾಡಲಿವೆ.
ದೇಶದ ಅಧ್ಯಕ್ಷರು ಪ್ರತಿವರ್ಷ ದೇಶವನ್ನುದ್ದೇಶಿಸಿ ಭಾಷಣ ಮಾಡುವುದು ಸಂವಿಧಾನದ ಪ್ರಕಾರ ಕಡ್ಡಾಯವಾಗಿದೆ. ಆದರೆ, 2022ರಲ್ಲಿ ಪುಟಿನ್ ಇಂಥ ಭಾಷಣ ಮಾಡಲಿಲ್ಲ. 2022 ರಲ್ಲಿ ಪುಟಿನ್ ಉಕ್ರೇನ್ ಮೇಲೆ ದಾಳಿ ನಡೆಸಿದ್ದು, ಇದರಲ್ಲಿ ರಷ್ಯಾ ಪಡೆಗಳಿಗೆ ಹಿನ್ನಡೆಯಾಗಿದೆ ಎನ್ನಲಾಗಿದೆ. ಇದೇ ಕಾರಣದಿಂದ ಅವರು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿಲ್ಲ ಎನ್ನಲಾಗಿದೆ. ಈಗ ಉಕ್ರೇನ್ ಮೇಲೆ ಯುದ್ಧ ಆರಂಭವಾಗಿ ಒಂದು ವರ್ಷವಾಗುವ ಕೆಲವೇ ದಿನಗಳಿಗೂ ಮುಂಚೆ ಪುಟಿನ್ ಭಾಷಣ ಮಾಡಲಿದ್ದಾರೆ.
ಉಕ್ರೇನ್ ಮೇಲಿನ ಯುದ್ಧದ ಬಗ್ಗೆ ಭಾಷಣದಲ್ಲಿ ಪ್ರಸ್ತಾಪ ಸಾಧ್ಯತೆ:ಉಕ್ರೇನ್ ಮೇಲಿನ ಯುದ್ಧದ ಬಗ್ಗೆ ವಿಶೇಷವಾಗಿ ರಷ್ಯಾ ಅಧ್ಯಕ್ಷರು ಮಾತನಾಡಬಹುದು ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. ಇನ್ನು ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ರಷ್ಯಾದ ಶೀತಲ ಸಮರದ ಬಗ್ಗೆಯೂ ಅವರು ಮಾತನಾಡಬಹುದು ಎಂದು ವಿಶ್ಲೇಷಕರು ನಿರೀಕ್ಷಿಸಿದ್ದಾರೆ. ಭಾಷಣ ಆರಂಭವಾಗುವ ಮುನ್ನ ಸೋಮವಾರದಿಂದಲೇ ಹಲವಾರು ಟಿವಿ ಚಾನಲ್ಗಳು ತಮ್ಮ ಸ್ಕ್ರೀನ್ ಮೇಲ ಕೌಂಟ್ ಡೌನ್ ಶುರು ಮಾಡಿವೆ. ಅಧ್ಯಕ್ಷರ ಇಂದಿನ ಭಾಷಣವು ಐತಿಹಾಸಿಕವಾಗಿರಬಹುದು ಎಂದು ರಷ್ಯಾದ ಸರ್ಕಾರಿ ಸುದ್ದಿ ಸಂಸ್ಥೆ RIA ನೊವೊಸ್ಟಿ ಹೇಳಿದೆ.