ವಾಷಿಂಗ್ಟನ್ ಡಿಸಿ: ಅಮೆರಿಕದಲ್ಲಿ ಅಕ್ರಮ ವಲಸಿಗರ ಮಕ್ಕಳ ಜನ್ಮಸಿದ್ಧ ಪೌರತ್ವ ಕೊನೆಗಾಣಿಸುವುದನ್ನು ಬೆಂಬಲಿಸುವುದಾಗಿ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಹೇಳಿದ್ದಾರೆ.
2024ರ ಅಧ್ಯಕ್ಷೀಯ ಚುನಾವಣೆ ಉಮೇದುವಾರಿಕೆ ಕುರಿತಾದ ರಿಪಬ್ಲಿಕನ್ ಪಕ್ಷದ ಎರಡನೇ ಚರ್ಚೆಯು ಕ್ಯಾಲಿಫೋರ್ನಿಯಾದ ಸಿಮಿ ವ್ಯಾಲಿಯಲ್ಲಿರುವ ರೊನಾಲ್ಡ್ ರೇಗನ್ ಅಧ್ಯಕ್ಷೀಯ ಗ್ರಂಥಾಲಯ ಮತ್ತು ವಸ್ತುಸಂಗ್ರಹಾಲಯದಲ್ಲಿ ಬುಧವಾರ ನಡೆಯಿತು. ಈ ವೇಳೆ ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ಮತ್ತು ವಿಶ್ವಸಂಸ್ಥೆಯ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ಸೇರಿದಂತೆ ಇತರೆ ಆರು ಅಭ್ಯರ್ಥಿಗಳೊಂದಿಗೆ ರಾಮಸ್ವಾಮಿ ವೇದಿಕೆಯನ್ನು ಹಂಚಿಕೊಂಡಿದ್ದರು.
ವಾಷಿಂಗ್ಟನ್ ಪತ್ರಿಕೆಯೊಂದರಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ದಾಖಲೆ ರಹಿತ ವಲಸಿಗರನ್ನು ಮತ್ತು ಅವರ ಮಕ್ಕಳನ್ನು ದೇಶದಿಂದ ಹೊರಹಾಕಲು ಯಾವ ಕಾನೂನುಗಳನ್ನು ಬಳಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಮಸ್ವಾಮಿ ಅವರು, 2015 ರಲ್ಲಿ ಡೊನಾಲ್ಡ್ ಟ್ರಂಪ್ ಜನ್ಮಸಿದ್ಧ ಪೌರತ್ವವನ್ನು ಕೊನೆಗೊಳಿಸುವುದಾಗಿ ಭರವಸೆ ನೀಡಿದ್ದರು. ಅಮೆರಿಕದಲ್ಲಿ ದಾಖಲೆ ರಹಿತ ವಲಸಿಗರ ಮಕ್ಕಳಿಗೆ ಪೌರತ್ವ ನೀಡಬಾರದು, ಏಕೆಂದರೆ ಅವರ ಪೋಷಕರು ಕಾನೂನನ್ನು ಉಲ್ಲಂಘಿಸಿ ದೇಶದಲ್ಲಿ ವಾಸಿಸಿದ್ದಾರೆ. ಹೀಗಾಗಿ, ದೇಶದಲ್ಲಿ ಅಕ್ರಮ ವಲಸಿಗರ ಮಕ್ಕಳಿಗೆ ಜನ್ಮಸಿದ್ಧ ಪೌರತ್ವವನ್ನು ಕೊನೆಗೊಳಿಸುವ ಮೂಲಕ ಒಂದು ಹೆಜ್ಜೆ ಮುಂದೆ ಇಡಲಾಗುವುದು ಎಂದು ಹೇಳಿದರು.
ಬಳಿಕ ಮಾತು ಮುಂದುವರೆಸಿದ ಅವರು, ದೇಶದ ದಕ್ಷಿಣದ ಗಡಿಯನ್ನು ಮಿಲಿಟರಿಗೊಳಿಸುವುದು, ನಿರಾಶ್ರಿತರ "ಅಭಯಾರಣ್ಯ ನಗರಗಳು" ಮತ್ತು ಮೆಕ್ಸಿಕೊ ಹಾಗೂ ಮಧ್ಯ ಅಮೆರಿಕಕ್ಕೆ ವಿದೇಶಿ ಸಹಾಯವನ್ನು ಕೊನೆಗೊಳಿಸುವಂತಹ ಇತರೆ ಕ್ರಮಗಳು ಮತ್ತು H-1B ವೀಸಾದ ಲಾಟರಿ ವ್ಯವಸ್ಥೆಯನ್ನು ಕೊನೆಗೊಳಿಸುವ ಅವಶ್ಯಕತೆಯಿದೆ ಎಂದು ವಾದಿಸಿದರು.