ವಾಷಿಂಗ್ಟನ್(ಅಮೆರಿಕ):ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಪರವಾಗಿ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದ ಭಾರತೀಯ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ ಉಮೇದುವಾರಿಕೆ ರೇಸ್‌ನಿಂದ ಹೊರಬಿದ್ದರು. ಅಯೋವಾ ಪ್ರೈಮರಿಯಲ್ಲಿ ನಿರಾಶಾದಾಯಕ ಫಲಿತಾಂಶ ಬಂದಿರುವ ಹಿನ್ನೆಲೆಯಲ್ಲಿ ಅವರು ಅಧ್ಯಕ್ಷೀಯ ರೇಸ್‌ನಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದಾರೆ. ಅಯೋವಾದ ಡೆಸ್ ಮೊಯಿನ್ಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಟ್ರಂಪ್ ಅವರನ್ನು ಗೆಲ್ಲಿಸಲು ಪ್ರಯತ್ನಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ವಿವೇಕ್‌ಗೆ 4ನೇ ಸ್ಥಾನ: ಅಯೋವಾ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಶೇ.51ರಷ್ಟು ಮತಗಳನ್ನು ಪಡೆದರು. ಎರಡನೇ ಸ್ಥಾನ ಪಡೆದ ರಾನ್ ಡಿಸಾಂಟಿಸ್ ಶೇ.21.2, ಮೂರನೇ ಸ್ಥಾನ ಪಡೆದ ನಿಕ್ಕಿ ಹ್ಯಾಲೆ ಶೇ.19.1 ಹಾಗು ವಿವೇಕ್ ರಾಮಸ್ವಾಮಿ ಶೇ.7.7ರಷ್ಟು ಮತ ಪಡೆದು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಅಯೋವಾ ಕಾಕಸಸ್ನಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಟ್ರಂಪ್ ಅವರಿಗೆ ಕರೆ ಮಾಡಿ ಅಭಿನಂದಿಸಿರುವುದಾಗಿ ವಿವೇಕ್ ಹೇಳಿದ್ದಾರೆ.
38ರ ವರ್ಷದ ರಾಮಸ್ವಾಮಿ ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಲು ಕಣಕ್ಕಿಳಿದು ಅನೇಕರ ಗಮನ ಸೆಳೆದಿದ್ದರು. ಪಕ್ಷದ ಉಮೇದುವಾರಿಕೆಗೆ ಸ್ಪರ್ಧಿಸಿದವರನ್ನು ಟೀಕಿಸುವ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ್ದರು. ಪ್ರಖರ ವಾಕ್ಚಾತುರ್ಯ ಮತ್ತು ನಿಷ್ಠುರತೆ ಅವರನ್ನು ಓಟದಲ್ಲಿ ಎದ್ದು ಕಾಣುವಂತೆ ಮಾಡಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲೂ ಅವರಿಗೆ ಭಾರಿ ಪ್ರಚಾರ ನೀಡಿತ್ತು. ಆದಾಗ್ಯೂ, ವಿವೇಕ್ ಮೊದಲಿನಿಂದಲೂ ಟ್ರಂಪ್ ಬಗ್ಗೆ ಸಕಾರಾತ್ಮಕವಾಗಿದ್ದವರು. ಟ್ರಂಪ್ ಅವರನ್ನು 21ನೇ ಶತಮಾನದ ಶ್ರೇಷ್ಠ ಅಮೆರಿಕನ್ ಅಧ್ಯಕ್ಷ ಎಂದು ಹಲವು ಬಾರಿ ಬಣ್ಣಿಸಿದ್ದರು. ಇತ್ತೀಚಿಗೆ ಟ್ರಂಪ್ ಅವರನ್ನು ಟೀಕೆ ಮಾಡಿದರೂ ಮೃದು ಧೋರಣೆ ತೋರಿರುವುದು ಎದ್ದು ಕಾಣಿಸುತ್ತಿತ್ತು.
ಬಿಲಿಯನೇರ್ ಉದ್ಯಮಿ ವಿವೇಕ್: ಓಹಿಯೋದ ಸಿನ್ಸಿನಾಟಿಯಲ್ಲಿ ಭಾರತೀಯ ದಂಪತಿಗೆ ಜನಿಸಿರುವ ವಿವೇಕ್ ರಾಮಸ್ವಾಮಿ ಬಿಲಿಯನೇರ್ ಉದ್ಯಮಿ. 2014ರಲ್ಲಿ, ರೋವಾಂಟ್ ಸೈನ್ಸಸ್ ಎಂಬ ಜೈವಿಕ ತಂತ್ರಜ್ಞಾನ ಕಂಪನಿ ಸ್ಥಾಪಿಸಿದ್ದರು. 2015 ಮತ್ತು 2016ರಲ್ಲಿ ಮಾರುಕಟ್ಟೆಗೆ ಅತಿದೊಡ್ಡ ಬಯೋಟೆಕ್ IPOಗಳನ್ನು ತಂದರು. ಇವುಗಳೊಂದಿಗೆ ಹೆಚ್ಚಿನ ಆರೋಗ್ಯ ಮತ್ತು ತಂತ್ರಜ್ಞಾನ ಕಂಪನಿಗಳನ್ನು ಸ್ಥಾಪಿಸಲಾಯಿತು. ಸ್ಟ್ರೈವ್ ಅಸೆಟ್ ಮ್ಯಾನೇಜ್‌ಮೆಂಟ್ ಹೆಸರಿನ ಹೊಸ ಕಂಪನಿಯನ್ನು 2022ರಲ್ಲಿ ರಚಿಸಿದರು. ಕಳೆದ ಫೆಬ್ರವರಿಯಲ್ಲಿ ಅಧ್ಯಕ್ಷೀಯ ಚುನಾವಣಾ ರೇಸ್‌ನಲ್ಲಿ ಭಾಗವಹಿಸುವುದಾಗಿ ಘೋಷಿಸಿದ್ದರು.
ಇದನ್ನೂ ಓದಿ:ರಿಪಬ್ಲಿಕನ್ ಅಧ್ಯಕ್ಷೀಯ ಅಭಿಯಾನ: ಟ್ರಂಪ್‌ಗೆ ಮಹತ್ವದ ಗೆಲುವು; ವೈಟ್‌ಹೌಸ್ ರೇಸ್ ತ್ಯಜಿಸಿದ ವಿವೇಕ್ ರಾಮಸ್ವಾಮಿ