ಲಂಡನ್: ವರ್ಜಿನ್ ಅಟ್ಲಾಂಟಿಕ್ ಏರ್‌ಲೈನ್ಸ್ ಸಂಸ್ಥೆಗೆ ಸೇರಿದ ಬೋಯಿಂಗ್ 787 ಡ್ರೀಮ್ ಲೈನರ್ ವಿಮಾನ ಶೇ.100ದಷ್ಟು ಅಡುಗೆ ಎಣ್ಣೆಯನ್ನೇ ಇಂಧನವಾಗಿ ಬಳಸಿ ಹಾರಾಟ ನಡೆಸಿದ ಮೊದಲ ವಾಣಿಜ್ಯ ವಿಮಾನ ಎಂಬ ದಾಖಲೆ ಬರೆದಿದೆ.
ಲಂಡನ್‌ನಿಂದ ನ್ಯೂಯಾರ್ಕ್‌ಗೆ ಪ್ರಯಾಣ: ವಿಮಾನವು ಲಂಡನ್ನ ಹೀಥ್ರೂದಿಂದ ನ್ಯೂಯಾರ್ಕ್ನ ಜಾನ್ ಎಫ್ ಕೆನಡಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿತು. ಈ ಮೂಲಕ ಜೆಟ್ ಇಂಧನವನ್ನು ಬಳಸದೇ ಶೇ. ನೂರರಷ್ಟು ಅಡುಗೆ ತೈಲವನ್ನೇ (ಸಸ್ಟೈನಬಲ್ ಏವಿಯೇಷನ್ ಫ್ಯೂಯಲ್) ಇಂಧನವಾಗಿ ಬಳಸಿ 38 ಸಾವಿರ ಅಡಿ ಎತ್ತರದಲ್ಲಿ, ಅಟ್ಲಾಂಟಿಕ್ ಸಾಗರದ ಮೂಲಕ ಹಾರಾಟ ನಡೆಸಿ ಇತಿಹಾಸ ಬರೆಯಿತು ಎಂದು ಏರ್‌ಲೈನ್ಸ್ ಬಹಿರಂಗಪಡಿಸಿದೆ.
ಕೆಲವೇ ಸಿಬ್ಬಂದಿಯೊಂದಿಗೆ ಹಾರಾಟ: ವಿಮಾನದಲ್ಲಿ ವರ್ಜಿನ್ ಅಟ್ಲಾಂಟಿಕ್ ಸಂಸ್ಥಾಪಕ ರಿಚರ್ಡ್ ಬ್ರಾನ್ಸನ್ ಮತ್ತು ಸಾರಿಗೆ ಕಾರ್ಯದರ್ಶಿ ಮಾರ್ಕ್ ಹಾರ್ಪರ್ ಸೇರಿದಂತೆ ಕೆಲವೇ ಸಿಬ್ಬಂದಿ ಮಾತ್ರ ಪ್ರಯಾಣಿಸಿದ್ದಾರೆ. ಈ ಹಿಂದೆ ರಾಯಲ್ ಏರ್‌ಫೋರ್ಸ್ ಕಾರ್ಗೋ ಏರ್‌ಕ್ರಾಫ್ಟ್ ಕೂಡಾ ಸಸ್ಟೈನಬಲ್ ಏವಿಯೇಷನ್ ಫ್ಯೂಯಲ್ನಿಂದ ಹಾರಾಟ ನಡೆಸಿತ್ತು. ಆದರೆ ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಅಡುಗೆ ಎಣ್ಣೆಯಿಂದಲೇ ಓಡಿದ ಮೊದಲ ಪ್ರಯಾಣಿಕ ವಿಮಾನ ಇದಾಗಿದೆ.