ಇಸ್ಲಾಮಾಬಾದ್ (ಪಾಕಿಸ್ತಾನ): ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದೆ. ಜನರು ಹಸಿವಿನಿಂದ ಒದ್ದಾಡುವ ದುಸ್ಥಿತಿ ಎದುರಾಗಿದೆ. ಇದಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ. ಗೋಧಿ ಹಿಟ್ಟು ಸರಬರಾಜು ಮಾಡುವ ಟ್ರಕ್ ಅನ್ನು ನೂರಾರು ಜನರು ಬೈಕ್‌ಗಳಲ್ಲಿ ಹಿಂಬಾಲಿಸುವ ವಿಡಿಯೋ ದೊರೆತಿದ್ದು, ಆತಂಕ ಸೃಷ್ಟಿಸುವಂತಿದೆ.
ಗೋಧಿ ಹಿಟ್ಟು ತುಂಬಿದ ಟ್ರಕ್‌ನಿಂದ ಹಿಟ್ಟಿನ ಚೀಲವನ್ನು ಖರೀದಿಸಲು ಇಬ್ಬರು ಪುರುಷರು ವಾಹನದ ಹಿಂಭಾಗದಲ್ಲಿ ಅಪಾಯಕಾರಿಯಾಗಿ ವಾಹನ ಸವಾರಿ ಮಾಡುತ್ತಿದ್ದಾರೆ. ವಾಹನದ ಹಿಂಬದಿ ನೂರಾರು ಜನರು ಬೈಕ್‌ಗಳೊಂದಿಗೆ ಟ್ರಕ್ ಅನ್ನು ಹಿಂಬಾಲಿಸುತ್ತಿದ್ದಾರೆ. ಈ ವಿಡಿಯೋವನ್ನು ಪ್ರೊಫೆಸರ್ ಸಜ್ಜದ್ ರಜಾ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ಇದು ಬೈಕ್ ಜಾಥಾವಲ್ಲ. ಗೋಧಿ ಹಿಟ್ಟಿನ ಚೀಲಕ್ಕಾಗಿ ಪಾಕಿಸ್ತಾನದ ಜನರು ಪಡುತ್ತಿರುವ ಕಷ್ಟ. ಇನ್ನಾದರೂ ಜಮ್ಮು ಕಾಶ್ಮೀರದ ಜನತೆ ಕಣ್ಣು ತೆರೆಯಬೇಕು. ನಾನು ಪಾಕಿಸ್ತಾನಿಯಾಗದೇ ಇರುವುದಕ್ಕೆ ಖುಷಿಯಾಗಿದೆ.' ಎಂದು ತಿಳಿಸಿದ್ದಾರೆ.
ಗೋಧಿ ಹಿಟ್ಟಿಗಾಗಿ ಕಾಲ್ತುಳಿತ: ಕೆಲವು ದಿನಗಳ ಹಿಂದೆ ಪಾಕ್‌ನ ಖೈಬರ್ ಪಖ್ತುಂಖ್ವಾ, ಸಿಂಧ್ ಮತ್ತು ಬಲೂಚಿಸ್ತಾನದಂತಹ ಪ್ರದೇಶಗಳಲ್ಲಿ ಜನರು ಸಬ್ಸಿಡಿ ದರದಲ್ಲಿ ಸಿಗುವ ಗೋಧಿ ಹಿಟ್ಟಿಗಾಗಿ ಗಂಟೆಗಟ್ಟಲೆ ಕಾಯುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಈ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರು. ಬಳಿಕ ಭದ್ರತಾ ಪಡೆಗಳ ಮೇಲ್ವಿಚಾರಣೆಯಲ್ಲಿ ಹಿಟ್ಟು ವಿತರಿಸಬೇಕಾಯಿತು.
ವಿದೇಶಗಳಿಂದ ನೆರವು ನಿರಾಕರಣೆ: ಏರುತ್ತಿರುವ ಆಹಾರ ಬೆಲೆಗಳಿಂದಾಗಿ ಪಾಕಿಸ್ತಾನದ ಹಣದುಬ್ಬರವು ಕಳೆದ ತಿಂಗಳು ಶೇ 24.5 ರಷ್ಟು ಹೆಚ್ಚಾಗಿದೆ. ಹಣದುಬ್ಬರ ಮತ್ತು ಕ್ಷೀಣಿಸುತ್ತಿರುವ ವಿದೇಶಿ ವಿನಿಮಯ ಸಂಗ್ರಹದಿಂದಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ನಂತಹ ಸಂಸ್ಥೆಗಳು ಹಣಕಾಸಿನ ನೆರವು ನೀಡಲು ನಿರಾಕರಿಸಿವೆ. ಇದರಿಂದಾಗಿ ಪಾಕಿಸ್ತಾನದ ಆರ್ಥಿಕತೆಯು ತೀವ್ರ ಸಂಕಷ್ಟದಲ್ಲಿದೆ. ಪಾಕಿಸ್ತಾನದಲ್ಲಿ ಹೆಚ್ಚಿನ ಜನರು ಗೋಧಿ ಹಿಟ್ಟು ಬಳಸುತ್ತಾರೆ. ಪಾಕಿಸ್ತಾನ ಸ್ಟ್ಯಾಟಿಸ್ಟಿಕ್ಸ್ ಬ್ಯೂರೋ ಪ್ರಕಾರ, ಗೋಧಿ ಹಿಟ್ಟಿನ ಬೆಲೆ ಕೆಲವೇ ದಿನಗಳಲ್ಲಿ 41 ಪ್ರತಿಶತದಿಂದ 57 ಪ್ರತಿಶತಕ್ಕೆ ಏರಿದೆಯಂತೆ.