ಢಾಕಾ (ಬಾಂಗ್ಲಾದೇಶ): ಅವಾಮಿ ಲೀಗ್ ಪಕ್ಷದ ಕಾರ್ಯಕರ್ತರು ಶನಿವಾರ ನಡೆಸಿದ ಗುಂಡಿನ ದಾಳಿಯಲ್ಲಿ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ (ಬಿಎನ್‌ಪಿ) ಕನಿಷ್ಠ 50 ನಾಯಕರು ಮತ್ತು ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ. ಕೊಮಿಲ್ಲಾದಲ್ಲಿ, ಲಾಲ್ಮಾಯಿ ಉಪಜಿಲಾ ಪರಿಷತ್ ಅಧ್ಯಕ್ಷ ಕಮರುಲ್ ಹಸನ್ ಮತ್ತು ಕೊಮಿಲ್ಲಾ ಸದರ್ ದಕ್ಷಿಣ ಉಪಜಿಲಾ ಪರಿಷತ್ ಅಧ್ಯಕ್ಷ ಗೋಲಮ್ ಸರ್ವಾರ್ ಅವರ ಬೆಂಬಲಿಗ ಅವಾಮಿ ಲೀಗ್ ಸದಸ್ಯರು ಗುಂಡು ಹಾರಿಸಿ ಬಿಎನ್‌ಪಿ ನಾಯಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ತಾವು ಆಯೋಜಿಸಿದ್ದ ಕಾರ್ಯಕ್ರಮವೊಂದರ ಸ್ಥಳವೊಂದನ್ನು ಅವಾಮಿ ಲೀಗ್ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ ಎಂದು ಸ್ಥಳೀಯ ಬಿಎನ್‌ಪಿ ಸದಸ್ಯರು ಆರೋಪಿಸಿದ್ದಾರೆ. ಕೊಮಿಲ್ಲಾದ ಲಾಲ್ಮಾಯಿ ಉಪಜಿಲಾದ ಬೆಲ್ಘರ್ ದಖಿನ್ ಯೂನಿಯನ್ ಪ್ರದೇಶದಲ್ಲಿ ಘಟನೆ ನಡೆದಿದೆ. ಕಾರ್ಯಕ್ರಮ ಪ್ರಾರಂಭವಾದಾಗ ಸಂಜೆ 5 ಗಂಟೆಗೆ ತಾವು ಅಲ್ಲಿರಬೇಕಿತ್ತು ಎಂದು ಬಿಎನ್‌ಪಿ ಅಧ್ಯಕ್ಷರ ಸಲಹೆಗಾರ ಮತ್ತು ಮಾಜಿ ಸಂಸದ ಮೊನಿರುಲ್ ಹಕ್ ಚೌಧರಿ ಹೇಳಿಕೊಂಡಿದ್ದಾರೆ.
ಆದಾಗ್ಯೂ, ಮಧ್ಯಾಹ್ನ 2 ಗಂಟೆಗೆ ಕೆಲ ಅವಾಮಿ ಲೀಗ್ ಕಾರ್ಯಕರ್ತರು ಆ ಸ್ಥಳದ ಸುತ್ತಲೂ ಜಮಾಯಿಸಿದ್ದಾರೆ ಎಂಬ ಮಾಹಿತಿ ಬಂದಿತ್ತು ಹಾಗೂ ನಂತರ ಅವರು ಅಲ್ಲಿ ಸೇರಿದ್ದ ಜನರ ಮೇಲೆ ಗುಂಡು ಹಾರಿಸಿದರು ಮತ್ತು ಸ್ಥಳವನ್ನು ಧ್ವಂಸಗೊಳಿಸಿದರು ಎಂದು ಮೊನಿರುಲ್ ಹಕ್ ಚೌಧರಿ ಆರೋಪಿಸಿದರು. ಜುಬೊ ದಳದ ಮುಖಂಡರಾದ ಫಿರೋಜ್ ಮತ್ತು ಮೊನಿರ್ ಅವರಿಗೆ ಗುಂಡು ತಗುಲಿದ್ದು, ಇದರಲ್ಲಿ ಒಬ್ಬರ ತಲೆಗೆ ಗುಂಡು ತಗುಲಿದೆ ಎಂದು ಅವರು ಹೇಳಿದರು. ಗಾಯಗೊಂಡ ನಾಯಕರನ್ನು ಕೊಮಿಲ್ಲಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.