ಬೋಸ್ಟನ್: ಸೇತುವೆ ಮೇಲೆ ಸಂಚರಿಸುತ್ತಿದ್ದ ರೈಲಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ತುರ್ತು ಮಾರ್ಗದ ಮೂಲಕ ಪ್ರಯಾಣಿಕರನ್ನು ರಕ್ಷಿಸಿದ ಘಟನೆ ಯುಎಸ್‌ನ ಬೋಸ್ಟನ್ ಹೊರವಲಯದಲ್ಲಿ ಶುಕ್ರವಾರ ನಡೆದಿದೆ. ಸುಮಾರು 200 ಜನರನ್ನು ರೈಲಿನಿಂದ ಹೊರಕ್ಕೆ ಸ್ಥಳಾಂತರಿಸಲಾಗಿದೆ. ಹೆಚ್ಚಿನವರು ರೈಲಿನ ಕಿಟಕಿಗಳ ಮೂಲಕ ತಪ್ಪಿಸಿಕೊಂಡಿದ್ದಾರೆ. ಆದರೆ ಓರ್ವ ಮಹಿಳೆ ಕೆಳಗಿನ ಮಿಸ್ಟಿಕ್ ನದಿಗೆ ಹಾರಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಮಸಾಚುಸೆಟ್ಸ್ ಬೇ ಸಾರಿಗೆ ಪ್ರಾಧಿಕಾರ (MBTA) ಹೇಳಿಕೆ ನೀಡಿದ್ದು, ಇಂದು ಬೆಳಗ್ಗೆ ಆರೆಂಜ್ ಲೈನ್ ರೈಲು ವೆಲ್ಲಿಂಗ್ಟನ್ ಮತ್ತು ಅಸೆಂಬ್ಲಿ ನಿಲ್ದಾಣದ ನಡುವಿನ ಸೇತುವೆ ಮೇಲೆ ಪ್ರಯಾಣಿಸುತ್ತಿದ್ದಾಗ ಅದರ ಹೆಡ್ ಕಾರಿನಿಂದ ಬೆಂಕಿ ಮತ್ತು ಹೊಗೆ ಬಂದಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ಈ ಕುರಿತು ಪಾರದರ್ಶಕವಾಗಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದೆ.