ಲಾಹೋರ್ (ಪಾಕಿಸ್ತಾನ):21 ವರ್ಷದ ಅಮೆರಿಕದ ಮಹಿಳೆಯೊಬ್ಬಳ ಮೇಲೆ ಪಂಜಾಬ್ ಪ್ರಾಂತ್ಯದ ಹೊಟೇಲ್ವೊಂದರಲ್ಲಿ ಇಬ್ಬರು ದುಷ್ಕರ್ಮಿಗಳಿಂದ ಅತ್ಯಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ.
ಡಿಜಿ ಖಾನ್ ಜಿಲ್ಲೆಯ ಫೋರ್ಟ್ ಮನ್ರೊ ಹಿಲ್ ಸ್ಟೇಶನ್ ನ ಹೊಟೇಲ್ ಒಂದರಲ್ಲಿ ಜುಲೈ 17 ರಂದು ಘಟನೆ ನಡೆದಿರುವುದಾಗಿ ವರದಿಯಾಗಿದೆ. ವ್ಲಾಗರ್ ಹಾಗೂ ಟಿಕ್ಟಾಕರ್ ಆಗಿರುವ, ಫೇಸ್ ಬುಕ್ ಪೇಜ್ ಒಂದನ್ನು ನಡೆಸುವ ಅಮೆರಿಕದ ಮಹಿಳೆ, ತನ್ನ ಇಬ್ಬರು ಸೋಷಿಯಲ್ ಮೀಡಿಯಾ ಗೆಳೆಯರಾದ ಮುಜಮಿಲ್ ಸಿಪ್ರಾ ಹಾಗೂ ಅಜಾನ ಖೋಸಾ ಅವರೊಂದಿಗೆ ಅಲ್ಲಿಗೆ ಹೋದಾಗ ಘಟನೆ ನಡೆದಿದೆ.
ಡಿಜಿ ಖಾನ್ ಡೆಪ್ಯೂಟಿ ಕಮಿಷನರ್ ಅನ್ವರ್ ಬರಿಯಾರ್ ಹೇಳುವ ಪ್ರಕಾರ - ಗೆಳೆಯ ಮುಜಮಿಲ್ ಸಿಪ್ರಾ ಎಂಬಾತನ ಆಹ್ವಾನದ ಮೇರೆಗೆ ಅಮೆರಿಕದ ಯುವತಿ ಕರಾಚಿಯಿಂದ ಫೋರ್ಟ್ ಮನ್ರೋಗೆ ಆಗಮಿಸಿದ್ದರು. ಯುವತಿಯು ಭಾನುವಾರ ಮುಜಮಿಲ್ ಸಿಪ್ರಾ ಅವರ ಮನೆಗೂ ಭೇಟಿ ನೀಡಿದ್ದರು. ಟೂರಿಸ್ಟ್ ವೀಸಾ ಮೇಲೆ ಪಾಕಿಸ್ತಾನಕ್ಕೆ ಬಂದಿರುವ ಯುವತಿ ಕಳೆದ ಏಳು ತಿಂಗಳಿಂದ ಪಾಕಿಸ್ತಾನದಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯು ಭಾನುವಾರ ಫೋರ್ಟ್ ಮನ್ರೋಗೆ ಭೇಟಿ ನೀಡಿ ಗೆಳೆಯರಾದ ಸಿಪ್ರಾ ಹಾಗೂ ಅಜಾನ್ ಖೋಸಾ ಅವರೊಂದಿಗೆ ವ್ಲಾಗ್ ತಯಾರಿಸಿದ್ದರು. ನಂತರ ಹೊಟೇಲ್ನಲ್ಲಿ ತಂಗಿದ್ದ ವೇಳೆ ಸಿಪ್ರಾ ಹಾಗೂ ಅಜಾನ್ ಇಬ್ಬರೂ ಸೇರಿಕೊಂಡು ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ. ಆರೋಪಿ ಸಿಪ್ರಾನನ್ನು ಬಂಧಿಸಿದ್ದು, ಇನ್ನೊಬ್ಬಾತನ ಬಂಧನಕ್ಕೆ ಬಲೆ ಬೀಸಲಾಗಿದೆ.