ಕರ್ನಾಟಕ

karnataka

ETV Bharat / international

ಜಾಂಬಿಯಾದಲ್ಲಿ ಅಜ್ಜ ಗೋಪಾಲನ್​ ಮನೆಗೆ ಅಮೆರಿಕದ ಉಪಾಧ್ಯಕ್ಷೆ ಭೇಟಿ: ಬಾಲ್ಯ ನೆನೆದ ಕಮಲಾ ಹ್ಯಾರಿಸ್ - ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿ ಪಿವಿ ಗೋಪಾಲನ್

ದಕ್ಷಿಣ ಆಫ್ರಿಕಾದ ಜಾಂಬಿಯಾದಲ್ಲಿ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ತಮ್ಮ ಅಜ್ಜ ಪಿವಿ ಗೋಪಾಲನ್ ವಾಸವಾಗಿದ್ದ ಮನೆಗೆ ಭೇಟಿ ಕೊಟ್ಟಿದ್ದಾರೆ.

us-vice-president-kamala-harris-visits-indian-grandfathers-house-in-zambia
ಜಾಂಬಿಯಾದಲ್ಲಿ ಅಜ್ಜ ಗೋಪಾಲನ್​ ಮನೆಗೆ ಅಮೆರಿಕದ ಉಪಾಧ್ಯಕ್ಷೆ ಭೇಟಿ: ಬಾಲ್ಯ ನೆನೆದ ಕಮಲಾ ಹ್ಯಾರಿಸ್

By

Published : Apr 1, 2023, 2:51 PM IST

ವಾಷಿಂಗ್ಟನ್ (ಅಮೆರಿಕ): ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜಾಂಬಿಯಾ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ತಮ್ಮ ಅಜ್ಜ (ತಾಯಿಯ ಅಪ್ಪ) ಮತ್ತು ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿ ಪಿವಿ ಗೋಪಾಲನ್ ಅವರನ್ನು ಸ್ಮರಿಸಿದ್ದಾರೆ. ಅಲ್ಲದೇ, ಲುಸಾಕಾದಲ್ಲಿರುವ ಗೋಪಾಲನ್ ಕುಟುಂಬ ವಾಸವಾಗಿದ್ದ ಮನೆಗೆ ಕಮಲಾ ಹ್ಯಾರಿಸ್ ಭೇಟಿ ನೀಡಿದ್ದಾರೆ.

ಲುಸಾಕಾದಲ್ಲಿ ಜಾಂಬಿಯಾ ಅಧ್ಯಕ್ಷ ಹಕೈಂಡೆ ಹಿಚಿಲೆಮಾ ಅವರೊಂದಿಗೆ ಕಮಲಾ ಹ್ಯಾರಿಸ್​ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಜ್ಜ ಗೋಪಾಲನ್ ಮತ್ತು ತಮ್ಮಬಾಲ್ಯದ ಬಗ್ಗೆ ಉಲ್ಲೇಖಿಸಿದ್ದಾರೆ. ನನ್ನ ಜಾಂಬಿಯಾ ಪ್ರವಾಸವು ನಿಮ್ಮಲ್ಲಿ ಅನೇಕರಿಗೆ ತಿಳಿದಿರುವಂತೆ ನನಗೆ ಮತ್ತು ನನ್ನ ಕುಟುಂಬಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಅಲ್ಲದೇ, ನನ್ನ ಅಜ್ಜ ಇಲ್ಲಿ ಕೆಲಸ ಮಾಡುವಾಗ ನಾನು ಚಿಕ್ಕ ಹುಡುಗಿಯಾಗಿ ಜಾಂಬಿಯಾಗೆ ಭೇಟಿ ನೀಡಿದ್ದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಅಮೆರಿಕ ಉಪಾಧ್ಯಕ್ಷೆಯಾಗಿ ಪದಗ್ರಹಣ.. ಕಮಲಾ ಹ್ಯಾರಿಸ್​ ಪೂರ್ವಜರ ಗ್ರಾಮದಲ್ಲಿ ಸಂಭ್ರಮಾಚರಣೆ

ಭಾರತದಲ್ಲಿ ಅಜ್ಜ ಸರ್ಕಾರಿ ನೌಕರರಾಗಿದ್ದರು. 1966ರಲ್ಲಿ ಜಾಂಬಿಯಾ ಸ್ವಾತಂತ್ರ್ಯಗೊಂಡ ಸ್ವಲ್ಪ ಸಮಯದ ನಂತರದಲ್ಲಿ ಪರಿಹಾರ ಕ್ರಮಗಳು ಮತ್ತು ನಿರಾಶ್ರಿತರ ನಿರ್ದೇಶಕರಾಗಿ ಸೇವೆ ಸಲ್ಲಿಸಲು ಲುಸಾಕಾಗೆ ಬಂದರು. ಅದು ಅವರಿಗೆ ಹೆಸರು ಕೂಡ ತಂದು ಕೊಟ್ಟಿತ್ತು ಎಂದು ಹೇಳಿದರು.

ಜಾಂಬಿಯಾದ ಮೊದಲ ಅಧ್ಯಕ್ಷರಾದ ಕೆನ್ನೆತ್ ಕೌಂಡಾ ಅವರ ಸಲಹೆಗಾರರಾಗಿಯೂ ನಮ್ಮ ಅಜ್ಜ ಸೇವೆ ಸಲ್ಲಿಸಿದರು. ನಿರಾಶ್ರಿತರ ಪುನರ್ವಸತಿ ಕಲ್ಪಿಸುವಲ್ಲಿ ಅವರು ಪರಿಣತರಾಗಿದ್ದರು. ನಾನು ಇಲ್ಲಿ ಕಳೆದ ನನ್ನ ಸಮಯವನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ಆಗ ನಾನು ಮಗುವಾಗಿದ್ದೆ. ಆದ್ದರಿಂದ ಇದು ನನಗೆ ಬಾಲ್ಯದ ನೆನಪು ಎಂದು ಕಮಲಾ ಹ್ಯಾರಿಸ್ ತಿಳಿಸಿದರು.

ನಾನು ಇತ್ತೀಚೆಗೆ ನನ್ನ ಚಿಕ್ಕಮ್ಮನೊಂದಿಗೆ ಮಾತನಾಡುತ್ತಿದ್ದೆ. ಆಕೆ ಕೆಲಸ ಮಾಡುವಾಗ ಬೆಳೆಸಿಕೊಂಡ ಸಂಬಂಧಗಳನ್ನು ನನಗೆ ನೆನಪಿಸುತ್ತಿದ್ದರು. ಲುಸಾಕಾ ಸೆಂಟ್ರಲ್ ಹಾಸ್ಪಿಟಲ್​ನಲ್ಲಿ ವೈದ್ಯರೊಂದಿಗೆ ಕೆಲಸ ಮಾಡುತ್ತಿದ್ದರು. ಆದ್ದರಿಂದ ನನ್ನ ಕುಟುಂಬ ಮತ್ತು ನಮ್ಮೆಲ್ಲರ ಪರವಾಗಿ ಎಲ್ಲರಿಗೂ ನಮ್ಮ ಶುಭಾಶಯಗಳನ್ನು ಮತ್ತು ನಮಸ್ಕಾರಗಳನ್ನು ತಿಳಿಸುತ್ತೇನೆ ಎಂದರು.

ಕಮಲಾ ಅಜ್ಜ ಗೋಪಾಲನ್ ಹಿನ್ನೆಲೆ: ಪಿವಿ ಗೋಪಾಲನ್ ಅವರನ್ನು 1966ರ ಜನವರಿಯಲ್ಲಿ ಭಾರತ ಸರ್ಕಾರವು ಪರಿಹಾರ ಕ್ರಮಗಳು ಮತ್ತು ನಿರಾಶ್ರಿತರ ನಿರ್ದೇಶಕರಾಗಿ ಜಾಂಬಿಯಾ ಸರ್ಕಾರದಲ್ಲಿ ನಿಯೋಜಿಸಿತ್ತು. ಈ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಗೋಪಾಲನ್​ ಅವರು ಭಾರತ ಸರ್ಕಾರದಲ್ಲಿ ಪುನರ್ವಸತಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಕಚೇರಿಯ ಮುಖ್ಯಸ್ಥರ ಹುದ್ದೆಯನ್ನು ತ್ಯಜಿಸಿದ್ದರು.

1969ರ ಜುಲೈನಲ್ಲಿ ಜಾಂಬಿಯಾ ಸರ್ಕಾರವು ಕರ್ತವ್ಯದಿಂದ ಅವರನ್ನು ಬಿಡುಗಡೆಗೊಳಿಸಲಾಗಿತ್ತು. ಅಲ್ಲಿಂದ ಭಾರತಕ್ಕೆ ಹಿಂತಿರುಗಿದ ಅವರು ಪುನರ್ವಸತಿ ಸಚಿವಾಲಯದಲ್ಲಿ ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿಯ ಕಚೇರಿಯ ಉಸ್ತುವಾರಿಯಾಗಿ ಸೇವೆ ಪುನಾರಂಭಿಸಿದ್ದರು.

ಮನೆ ಪತ್ತೆ ಹಚ್ಚಲು ಸಾಹಸ ಪಟ್ಟ ಅಧಿಕಾರಿಗಳು:ಲುಸಾಕಾದಲ್ಲಿ ಕಮಲಾ ಹ್ಯಾರಿಸ್ ಅಜ್ಜನ ಮನೆ ಪತ್ತೆ ಹಚ್ಚಲು ಅಮೆರಿಕದ ರಾಯಭಾರ ಕಚೇರಿಯು ಸಾಕಷ್ಟು ಪ್ರಯತ್ನವನ್ನು ಮಾಡಿದೆ. ಅಮೆರಿಕದ ಶ್ವೇತಭವನದ ಅಧಿಕಾರಿಯೊಬ್ಬರ ಪ್ರಕಾರ, 1960ರ ದಶಕದಲ್ಲಿ ಲುಸಾಕಾದಲ್ಲಿದ್ದಾಗ ಕಮಲಾ ಹ್ಯಾರಿಸ್ ಕುಟುಂಬವು 16 ಇಂಡಿಪೆಂಡೆನ್ಸ್ ಅವೆನ್ಯೂದಲ್ಲಿ ವಾಸಿಸುತ್ತಿತ್ತು. ಈಗ ಇದರ ವಿಳಾಸ ಸಂಖ್ಯೆಯು ಬದಲಾಗಿದೆ. ಅಂತಿಮವಾಗಿ ಸಾರ್ವಜನಿಕ ದಾಖಲೆಗಳು ಮತ್ತು ಭೂ ಸಮೀಕ್ಷೆಗಳಲ್ಲಿನ ಪ್ಲಾಟ್ ಸಂಖ್ಯೆಗಳನ್ನು ಬಳಸಿಕೊಂಡು ಅಜ್ಜನ ಸ್ಥಳವನ್ನು ಗುರುತಿಸಲಾಯಿತು.

ಸಾರ್ವಜನಿಕ ದಾಖಲೆಗಳ ಪರಿಶೀಲನೆ, ಜಾಂಬಿಯಾ ಮತ್ತು ಭಾರತೀಯ ಅಧಿಕಾರಿಗಳ ಸಂಪರ್ಕ ಮಾಡಲಾಗಿತ್ತು. ಅಲ್ಲದೇ, ಆ ಸಮಯದಲ್ಲಿ ಜಾಂಬಿಯಾ ಸರ್ಕಾರದಲ್ಲಿ ಕೆಲಸ ಮಾಡಿದವರೊಂದಿಗೆ ಅಮೆರಿಕ ಅಧಿಕಾರಿಗಳು ಮಾತುಕತೆ ನಂತರ ಮನೆಯನ್ನು ಪತ್ತೆ ಹಚ್ಚಲಾಯಿತು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಶ್ವೇತಭವನದಲ್ಲಿ ದೀಪಾವಳಿ ಹಬ್ಬ ಆಚರಿಸಿದ ಜೋ ಬೈಡನ್.. ಕಮಲಾ ಹ್ಯಾರಿಸ್​​

ABOUT THE AUTHOR

...view details