ಕರ್ನಾಟಕ

karnataka

ETV Bharat / international

ಉಕ್ರೇನ್​ಗೆ ಮತ್ತೆ 250 ಮಿಲಿಯನ್ ಡಾಲರ್​ ಮೌಲ್ಯದ ಮಿಲಿಟರಿ ನೆರವು ನೀಡಿದ ಅಮೆರಿಕ - ಹೊಸ ಮಿಲಿಟರಿ ಪ್ಯಾಕೇಜ್​ ವಾಯು ರಕ್ಷಣೆಗಾಗಿ

ರಷ್ಯಾದ ದಾಳಿಯ ವಿರುದ್ಧ ಹೋರಾಟ ನಡೆಸುತ್ತಿರುವ ಉಕ್ರೇನ್​ಗೆ ಮತ್ತೆ 250 ಮಿಲಿಯನ್ ಡಾಲರ್ ಮೊತ್ತದ ಮಿಲಿಟರಿ ನೆರವು ನೀಡಲು ಅಮೆರಿಕ ಮುಂದಾಗಿದೆ.

US provides $250 mn worth of military assistance
US provides $250 mn worth of military assistance

By ETV Bharat Karnataka Team

Published : Aug 30, 2023, 12:30 PM IST

ವಾಷಿಂಗ್ಟನ್: ರಷ್ಯಾದೊಂದಿಗೆ ಯುದ್ಧದಲ್ಲಿ ನಿರತವಾಗಿರುವ ಉಕ್ರೇನ್​ಗೆ ಅಮೆರಿಕ 250 ಮಿಲಿಯನ್ ಡಾಲರ್ ಮೌಲ್ಯದ ಹೆಚ್ಚುವರಿ ಮಿಲಿಟರಿ ನೆರವು ಘೋಷಿಸಿದೆ. ಹೊಸ ಮಿಲಿಟರಿ ಪ್ಯಾಕೇಜ್​ ವಾಯು ರಕ್ಷಣೆಗಾಗಿ ಎಐಎಂ -9 ಎಂ ಕ್ಷಿಪಣಿಗಳು, ಹೈ ಮೊಬಿಲಿಟಿ ಆರ್ಟಿಲರಿ ರಾಕೆಟ್ ಸಿಸ್ಟಮ್​ ಶಸ್ತ್ರಾಸ್ತ್ರಗಳು, 155 ಎಂಎಂ ಮತ್ತು 105 ಎಂಎಂ ಫಿರಂಗಿ ಮದ್ದುಗುಂಡುಗಳು ಮತ್ತು 3 ಮಿಲಿಯನ್ ಸುತ್ತು ಸಣ್ಣ ಶಸ್ತ್ರಾಸ್ತ್ರ ಮದ್ದುಗುಂಡುಗಳು ಸೇರಿವೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಅಧ್ಯಕ್ಷೀಯ ಡ್ರಾಡೌನ್ ಅಥಾರಿಟಿ (ಪಿಡಿಎ) ಅಥವಾ ಅಧ್ಯಕ್ಷರ ವಿವೇಚನಾ ಅಧಿಕಾರ ಬಳಸಿ ಅಧ್ಯಕ್ಷ ಜೋ ಬೈಡನ್ ಅವರು ಈ ಹಿಂದೆ ನೀಡಿದ್ದ ನಿರ್ದೇಶನಗಳ ಮೇರೆಗೆ ಇತ್ತೀಚಿನ ಈ ನೆರವನ್ನು ಕಾರ್ಯಗತಗೊಳಿಸಲಾಗಿದೆ. ಈ ಯೋಜನೆಯ ಮೂಲಕ ಉಕ್ರೇನ್​ಗೆ ಒದಗಿಸಲಾಗುವ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳನ್ನು ರಕ್ಷಣಾ ಇಲಾಖೆಯ (ಡಿಒಡಿ) ದಾಸ್ತಾನುಗಳಿಂದ ನೇರವಾಗಿ ಪಡೆಯಲಾಗುತ್ತದೆ.

ಆಗಸ್ಟ್ 2021 ರಿಂದ ಉಕ್ರೇನ್​ಗೆ ಬೈಡನ್ ಆಡಳಿತದ 45 ನೇ ಪಿಡಿಎ ಸಂಬಂಧಿತ ಮಿಲಿಟರಿ ಸಹಾಯವಾಗಿದೆ ಎಂದು ಉಕ್ರೇನ್​ಗೆ ಪೂರೈಕೆಯಾಗುತ್ತಿರುವ ಇತ್ತೀಚಿನ ಶಸ್ತ್ರಾಸ್ತ್ರಗಳ ಡಿಒಡಿ ಪಟ್ಟಿ ತಿಳಿಸಿದೆ. ಬೈಡನ್ ಆಡಳಿತವು ಅಧಿಕಾರ ವಹಿಸಿಕೊಂಡಾಗಿನಿಂದ ಅಮೆರಿಕ ಉಕ್ರೇನ್​ಗೆ 43.7 ಬಿಲಿಯನ್ ಡಾಲರ್​ಗಿಂತ ಹೆಚ್ಚಿನ ಮಿಲಿಟರಿ ಸಹಾಯವನ್ನು ನೀಡಿದೆ ಎಂದು ಡಿಒಡಿ ತಿಳಿಸಿದೆ.

ಉಕ್ರೇನ್​ ಮೇಲೆ ರಷ್ಯಾ ಆಕ್ರಮಣ ಆರಂಭಿಸಿದಾಗಿನಿಂದ ವಾಷಿಂಗ್ಟನ್​​​ ಕೀವ್​ಗೆ ಹತ್ತಾರು ಶತಕೋಟಿ ಡಾಲರ್ ಮಿಲಿಟರಿ ನೆರವು ನೀಡಿದೆ. ಅಮೆರಿಕದ ಮಿಲಿಟರಿ ನೆರವಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಕೃತಜ್ಞತೆ ಸಲ್ಲಿಸಿದ್ದಾರೆ. "ಹೊಸ ರಕ್ಷಣಾ ಪ್ಯಾಕೇಜ್ ನೀಡಿದ್ದಕ್ಕಾಗಿ ನಾನು ಅಮೆರಿಕದ ಎಲ್ಲ ಜನರಿಗೆ, ಸರ್ಕಾರಕ್ಕೆ ಮತ್ತು ವೈಯಕ್ತಿಕವಾಗಿ ಅಧ್ಯಕ್ಷರಿಗೆ ಕೃತಜ್ಞನಾಗಿದ್ದೇನೆ" ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. "ಸ್ವಾತಂತ್ರ್ಯಕ್ಕೆ ರಕ್ಷಣೆಯ ಅಗತ್ಯವಿದೆ ಮತ್ತು ಈ ರಕ್ಷಣೆ ಬಲವಾಗಿ ಬೆಳೆಯುತ್ತಿದೆ" ಎಂದು ಅವರು ಹೇಳಿದ್ದಾರೆ.

ಯುದ್ಧ ಭೂಮಿಯ ಬೆಳವಣಿಗೆಗಳನ್ನು ನೋಡುವುದಾದರೆ ಉಕ್ರೇನಿಯನ್ ಯೋಧರು ತವ್ರಿಯಾ ಪ್ರದೇಶದಲ್ಲಿ ಮುನ್ನಡೆ ಸಾಧಿಸುತ್ತಿರುವ ಬಗ್ಗೆ ವರದಿಗಳು ಹೇಳಿವೆ. ಹೋರಾಟದ ಮುಂಚೂಣಿಯ ಈ ಪ್ರದೇಶದಲ್ಲಿ ಕೆಲ ದಿನಗಳಲ್ಲಿ ರಷ್ಯಾ ತನ್ನ 327 ಸೈನಿಕರನ್ನು ಕಳೆದುಕೊಂಡಿದೆ ಹಾಗೂ 235 ಜನ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

24 ಫೆಬ್ರವರಿ 2022 ರಂದು ರಷ್ಯಾದ ಮಿಲಿಟರಿ ಪಡೆಗಳು ಬೆಲಾರಸ್, ರಷ್ಯಾ ಮತ್ತು ಕ್ರಿಮಿಯಾದಿಂದ ಉಕ್ರೇನ್​ ಮೇಲೆ ದಾಳಿ ಆರಂಭಿಸುವುದರೊಂದಿಗೆ ಪ್ರಸ್ತುತ ಸಂಘರ್ಷ ಆರಂಭವಾಗಿತ್ತು. ಆಕ್ರಮಣಕ್ಕೆ ಮೊದಲು ಪೂರ್ವ ಉಕ್ರೇನ್​ನಲ್ಲಿ ಉಕ್ರೇನ್ ಸರ್ಕಾರಿ ಪಡೆಗಳು ಮತ್ತು ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳ ನಡುವೆ ಈ ಮೊದಲೇ ಎಂಟು ವರ್ಷಗಳಿಂದ ಸಂಘರ್ಷ ನಡೆದಿತ್ತು.

ಇದನ್ನೂ ಓದಿ : ಉಕ್ರೇನ್​ ಪೈಲಟ್​ಗಳಿಗೆ ಅಮೆರಿಕದಿಂದ ಎಫ್-16 ಫೈಟರ್ ಜೆಟ್ ತರಬೇತಿ

ABOUT THE AUTHOR

...view details