ಡಲ್ಲಾಸ್ (ಅಮೆರಿಕ) : ಅಮೆರಿಕದಲ್ಲಿ ಗುಂಡಿನ ದಾಳಿಯ ಪಿಡುಗು ಕಡಿಮೆ ಆಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ದೇಶಾದ್ಯಂತ ಇಂತಹ ಭಯಾನಕ ದಾಳಿಗಳು ನಡೆಯುತ್ತಲೇ ಇವೆ. ಇದೀಗ ಡಲ್ಲಾಸ್ನ ಮನೆಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಂದು ವರ್ಷದ ಬಾಲಕ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. 15 ವರ್ಷದ ಬಾಲಕಿ ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದಾಳೆ ಎಂದು ಡಲ್ಲಾಸ್ ಪೊಲೀಸರು ತಿಳಿಸಿದ್ದಾರೆ. ನಗರದ ಆಗ್ನೇಯ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಈ ದಾಳಿ ನಡೆದಿದೆ ಎಂದು ಅಮೆರಿಕದ ಪೊಲೀಸರು ಮಾಹಿತಿ ನೀಡಿದ್ದಾರೆ.
ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ವಯಸ್ಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 1 ವರ್ಷದ ಹುಡುಗ ಮತ್ತು 15 ವರ್ಷದ ಬಾಲಕಿ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಇದರಲ್ಲಿ ಒಂದು ವರ್ಷದ ಮಗು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ. ಗಾಯಗೊಂಡ ಬಾಲಕಿಗೆ ಚಿಕಿತ್ಸೆ ಮುಂದುವರಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಗುಂಡಿನ ದಾಳಿ ನಡೆಸಿರುವ ಶಂಕಿತ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಎರಡು ಪ್ರತ್ಯೇಕ ಘಟನೆಗಳಲ್ಲಿ ಈ ಸಾವುಗಳಾಗಿವೆ ಎಂದು ಪೊಲೀಸರು ಶಂಕಿಸಿದ್ದಾರೆ.
ಡಲ್ಲಾಸ್ ಕೌಂಟಿ ಪೊಲೀಸರ ಪ್ರಕಾರ, ಕೊಲ್ಲಲ್ಪಟ್ಟವರನ್ನು ಲೋಗನ್ ಡಿ ಲಾ ಕ್ರೂಜ್, ವನೆಸ್ಸಾ ಡಿ ಲಾ ಕ್ರೂಜ್, ಕರೀನಾ ಲೋಪೆಜ್ ಮತ್ತು ಜೋಸ್ ಲೋಪೆಜ್ ಎಂದು ಗುರುತಿಸಲಾಗಿದೆ.