ಕರ್ನಾಟಕ

karnataka

ETV Bharat / international

ಭಾರತ-ಕೆನಡಾ ವಿವಾದ ತೀವ್ರ ಕಳವಳಕಾರಿ... ತನಿಖೆ ಮುಂದುವರಿಯುವುದು ನಿರ್ಣಾಯಕ: ಆಂಟನಿ ಬ್ಲಿಂಕನ್ - ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ

ಭಾರತ-ಕೆನಡಾ ರಾಜತಾಂತ್ರಿಕ ವಿವಾದದ ಕುರಿತು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಪ್ರತಿಕ್ರಿಯಿಸಿದ್ದಾರೆ. ಕೆನಡಾ ಪ್ರಧಾನಿ ಟ್ರುಡೊ ಅವರ ಆರೋಪಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಅವರು ತನಿಖೆ ಮುಂದುವರಿಯುವುದು ನಿರ್ಣಾಯಕ ಎಂದು ಹೇಳಿದ್ಧಾರೆ.

US Secretary of State Blinken
ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್

By ETV Bharat Karnataka Team

Published : Sep 23, 2023, 11:03 AM IST

ನ್ಯೂಯಾರ್ಕ್(ಅಮೆರಿಕ):ಸರ್ರೆಯಲ್ಲಿ ನಡೆದ ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪಗಳ ಬಗ್ಗೆ ಅಮೆರಿಕ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಬಗ್ಗೆ ತನಿಖೆ ಮುಂದುವರಿಯುವುದು ನಿರ್ಣಾಯಕವಾಗಿದೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಹೇಳಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಲಿಂಕೆನ್, "ಪ್ರಧಾನಿ ಟ್ರುಡೊ ಅವರು ಎತ್ತಿರುವ ಆರೋಪಗಳ ಬಗ್ಗೆ ನಾವು ತೀವ್ರ ಕಳವಳ ಹೊಂದಿದ್ದೇವೆ. ಈ ವಿಷಯದ ಬಗ್ಗೆ ನಾವು ನಮ್ಮ ಕೆನಡಾದ ಸಹೋದ್ಯೋಗಿಗಳೊಂದಿಗೆ ಬಹಳ ನಿಕಟವಾಗಿ ಸಮಾಲೋಚನೆ ನಡೆಸುತ್ತಿದ್ದೇವೆ. ನಮ್ಮ ದೃಷ್ಟಿಕೋನದಿಂದ ಕೆನಡಾದ ತನಿಖೆ ಮುಂದುವರೆಯುವುದು ನಿರ್ಣಾಯಕವಾಗಿದೆ. ತನಿಖೆಯಲ್ಲಿ ಭಾರತ ಕೆನಡಿಯನ್ನರೊಂದಿಗೆ ಕೆಲಸ ಮಾಡುವುದು ಮುಖ್ಯ" ಎಂದು ಅವರು ಹೇಳಿದರು.

ರಾಜತಾಂತ್ರಿಕ ಗದ್ದಲದ ನಡುವೆ ಎರಡೂ ರಾಷ್ಟ್ರಗಳೊಂದಿಗೆ ಅಮೆರಿಕ ನಡೆಸಿದ ರಾಜತಾಂತ್ರಿಕ ಮಾತುಕತೆಗಳ ವಿವರಗಳನ್ನು ನೀಡಲು ನಿರಾಕರಿಸಿದ ಅವರು, ತನಿಖೆ ಮುಂದುವರಿದು ಪೂರ್ಣಗೊಳ್ಳಬೇಕು ಎಂದರು. ನಾವು ಹೊಂದಿರುವ ರಾಜತಾಂತ್ರಿಕ ಸಂಭಾಷಣೆಗಳನ್ನು ನಿರೂಪಿಸಲು ಅಥವಾ ಮಾತನಾಡಲು ಹೋಗುವುದಿಲ್ಲ. ನಾವು ಭಾರತ ಸರ್ಕಾರದೊಂದಿಗೆ ನೇರವಾಗಿ ತೊಡಗಿಸಿಕೊಂಡಿದ್ದೇವೆ. ಅಲ್ಲದೇ ಕೆನಡಾ ಸರ್ಕಾರ ಈ ವಿಷಯಕ್ಕೆ ಸಂಬಂಧಿಸಿದಂತೆ ನಡೆಸುತ್ತಿರುವ ತನಿಖೆಗೆ ಭಾರತ ಸಹಕರಿಸುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಭಾರತ-ಕೆನಡಾ ರಾಜತಾಂತ್ರಿಕ ವಿವಾದ: ಕಳೆದ ಜೂ.18 ರಂದು ಬ್ರಿಟಿಷ್ ಕೊಲಂಬಿಯಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ ಸಂಭಾವ್ಯ ಪಾತ್ರದ ಬಗ್ಗೆ ಟ್ರೂಡೊ ಗಂಭೀರ ಆರೋಪ ಮಾಡಿದ್ದರು. ಇದು ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆಗೆ ಕಾರಣವಾಯಿತು. ಭಾರತ ಈ ಆರೋಪಗಳನ್ನು ಅಸಂಬದ್ಧ ಮತ್ತು ಪ್ರೇರಣೆ ಎಂದು ಜರಿದಿತ್ತು. ಪ್ರಕರಣ ಸಂಬಂಧ ಉಭಯ ರಾಷ್ಟ್ರಗಳು ರಾಜತಾಂತ್ರಿಕ ಅಧಿಕಾರಿಗಳನ್ನು ಉಚ್ಚಾಟನೆ ಮಾಡಿದ್ದವು.

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಧಾನಿ ಟ್ರೂಡೊ "ನಾವು ಕಾನೂನಿನ ಆಳ್ವಿಕೆಗೆ ಬದ್ಧವಾಗಿದ್ದೇವೆ. ಯಾವುದೇ ದೇಶವು ತನ್ನ ಸ್ವಂತ ನೆಲದಲ್ಲಿ ನಾಗರಿಕರ ಹತ್ಯೆಯಲ್ಲಿ ಭಾಗಿಯಾಗಿರುವುದು ಸ್ವೀಕಾರಾರ್ಹವಲ್ಲ ಎಂಬುದನ್ನು ಎತ್ತಿ ತೋರಿಸುತ್ತದೆ. ಬಲವಾದ, ಸ್ವತಂತ್ರ ನ್ಯಾಯ ವ್ಯವಸ್ಥೆಯನ್ನು ಹೊಂದಿರುವ ದೇಶವಾಗಿ ಆ ನ್ಯಾಯಿಕ ಪ್ರಕ್ರಿಯೆಗಳನ್ನು ಅತ್ಯಂತ ಸಮಗ್ರತೆಯಿಂದ ಕಾಪಾಡುವುದು ಮುಖ್ಯ" ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.

ಜಸ್ಟಿನ್ ಟ್ರುಡೋ ಆರೋಪವೇನು?: ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ನಿಷೇಧಿತ ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥ ಮತ್ತು ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬ. ಈತನ ತಲೆಗೆ 10 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಲಾಗಿತ್ತು. ಜೂ.18ರಂದು ಪಶ್ಚಿಮ ಕೆನಡಾದ ಸರ್ರೆಯ ಗುರುದ್ವಾರದ ಹೊರಗೆ ಇಬ್ಬರು ಅಪರಿಚಿತ ಬಂದೂಕುಧಾರಿಗಳು ಈತನನ್ನು ಗುಂಡಿಕ್ಕಿ ಕೊಂದಿದ್ದರು. ಸರ್ರೆಯಲ್ಲಿ ನಡೆದ ನಿಜ್ಜರ್ (45) ಹತ್ಯೆಯಲ್ಲಿ 'ಭಾರತ ಸರ್ಕಾರದ ಏಜೆಂಟ್​' ಭಾಗಿಯಾಗಿದ್ದಾರೆ ಎಂದು ಕೆನಡಾ ಪ್ರಧಾನಿ ಟ್ರೂಡೊ ಆರೋಪಿದ್ದಾರೆ. ಜಿ20 ಶೃಂಗಸಭೆಯಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದ್ದೇನೆ ಎಂದು ಹೇಳಿದ್ದರು.

ಇದನ್ನೂ ಓದಿ:ನಿಜ್ಜರ್ ಹತ್ಯೆ ಆರೋಪಗಳ ಬಗ್ಗೆ ವಾರಗಳ ಹಿಂದೆಯೇ ಭಾರತಕ್ಕೆ ಸಾಕ್ಷ್ಯಾಧಾರ ನೀಡಲಾಗಿದೆ: ಕೆನಡಾ ಪಿಎಂ ಟ್ರುಡೊ

ABOUT THE AUTHOR

...view details