ಪ್ಯೊಂಗ್ಯಾಂಗ್( ಉತ್ತರ ಕೊರಿಯಾ):ಅಮೆರಿಕ ಸೇರಿದಂತೆ ಹಲವು ಪಾಶ್ಚಿಮಾತ್ಯ ದೇಶಗಳಿಗೆ ಸವಾಲೆಸೆದಿರುವ ಉತ್ತರ ಕೊರಿಯಾ ಮತ್ತೊಮ್ಮೆ ತನ್ನ ಶಸ್ತ್ರಾಸ್ತ್ರ ಸಂಗ್ರಹದ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. ಇತ್ತೀಚಿನ ಮಾಹಿತಿ ಪ್ರಕಾರ, ಉತ್ತರ ಕೊರಿಯಾವು ಅದರ ಆಡಳಿತಗಾರ ಕಿಮ್ ಜಾಂಗ್ ಉನ್ ನೇತೃತ್ವದಲ್ಲಿ ಎಂಟು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಒಂದರ ನಂತರ ಒಂದರಂತೆ ಪೂರ್ವ ಕರಾವಳಿಯಿಂದ ಸಮುದ್ರದ ಕಡೆಗೆ ಹಾರಿಸಿವೆ.
ಉತ್ತರ ಕೊರಿಯಾದ ಈ ಕ್ಷಿಪಣಿ ಪರೀಕ್ಷೆಯು ಅಮೆರಿಕಕ್ಕೆ ನೇರವಾಗಿ ಸವಾಲು ಹಾಕುವಂತಿದೆ. ಉತ್ತರ ಕೊರಿಯಾದ ಯಶಸ್ವಿ ಕ್ಷಿಪಣಿ ಪರೀಕ್ಷೆಯನ್ನು ದೃಢೀಕರಿಸಿದ ಸುದ್ದಿ ಸಂಸ್ಥೆಗಳು, ಅಮೆರಿಕ ಮತ್ತು ದಕ್ಷಿಣ ಕೊರಿಯಾ ನಡೆಸಿದ ಸಮರಾಭ್ಯಾಸದ ಒಂದು ದಿನದ ಬಳಿಕ ಕಿಮ್ ಸರ್ಕಾರವು ಈ ಪರೀಕ್ಷೆ ನಡೆಸಿತು ಎಂದು ಹೇಳಿವೆ.
ಬ್ಯಾಲಿಸ್ಟಿಕ್ ಕ್ಷಿಪಣಿ ಯಶಸ್ವಿ:ಉತ್ತರ ಕೊರಿಯಾ ಭಾನುವಾರ ಒಂದರ ಹಿಂದೆ ಒಂದರಂತೆ ಎಂಟು ಕಡಿಮೆ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಸಮುದ್ರದ ಕಡೆಗೆ ಉಡಾಯಿಸಿದೆ. ದಕ್ಷಿಣ ಕೊರಿಯಾದ ಸೇನೆ ಈ ಮಾಹಿತಿ ನೀಡಿದೆ. ರಾಜಧಾನಿ ಪ್ಯೊಂಗ್ಯಾಂಗ್ ಬಳಿಯ ಸುನಾನ್ ಪ್ರದೇಶದಿಂದ 35 ನಿಮಿಷಕ್ಕೂ ಹೆಚ್ಚು ಕಾಲ ಎಂಟು ಕ್ಷಿಪಣಿಗಳ ಪರೀಕ್ಷೆ ನಡೆಸಲಾಗಿದೆ ಎಂದು ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು ತಿಳಿಸಿದ್ದಾರೆ.