ವಾಷಿಂಗ್ಟನ್:ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಾಳೆ ಮತ್ತು ನಾಡಿದ್ದು (ಸೆ.9.10) ನಡೆಯಲಿರುವ ಐತಿಹಾಸಿಕ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ವಿಮಾನವೇರಿದ್ದಾರೆ. ಈ ಪ್ರವಾಸಕ್ಕೂ ಮುನ್ನ ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರಗಳ (ಸಿಡಿಸಿ) ಕೋವಿಡ್ 19 ಮಾರ್ಗಸೂಚಿಗಳನ್ನು ಅವರು ಅನುಸರಿಸಿದ್ದಾರೆ. ಪತ್ನಿ ಜಿಲ್ ಬೈಡನ್ ಕೂಡಾ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಇಬ್ಬರ ಕೋವಿಡ್ ವರದಿ ನೆಗೆಟಿವ್ ಬಂದಿದೆ ಎಂದು ಶ್ವೇತಭವನ ತಿಳಿಸಿದೆ.
ಬೈಡನ್ ಭಾರತಕ್ಕೆ ಹೊರಡುವ ಒಂದು ಗಂಟೆಗೂ ಮೊದಲು ಮಾಹಿತಿ ನೀಡಿದ ಶ್ವೇತಭವನ, ''ಅಧ್ಯಕ್ಷರು ಕೋವಿಡ್ ಪರೀಕ್ಷೆ ಮಾಡಿಸಿದ್ದಾರೆ. ವರದಿ ನೆಗೆಟಿವ್ ಬಂದಿದೆ. ಜಿಲ್ ಬೈಡನ್ ಅವರು ಡೆಲವೇರ್ ಮನೆಯಲ್ಲಿ ಕ್ವಾರಂಟೈನ್ ಆಗಿದ್ದು, ಭಾರತ ಮತ್ತು ವಿಯೆಟ್ನಾಂಗೆ ಅಧ್ಯಕ್ಷರೊಂದಿಗೆ ಪ್ರಯಾಣಿಸುತ್ತಿಲ್ಲ'' ಎಂದು ಹೇಳಿದೆ.
ಬೈಡನ್ ಜೊತೆಗೆ ಅಧಿಕಾರಿಗಳ ನಿಯೋಗ:ಏರ್ ಫೋರ್ಸ್ ಒನ್ ವಿಮಾನದಲ್ಲಿ ಅಮೆರಿಕ ಅಧ್ಯಕ್ಷರೊಂದಿಗೆ ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್, ಸಿಬ್ಬಂದಿ ಉಪ ಮುಖ್ಯಸ್ಥ ಜೆನ್ ಒ'ಮಲ್ಲಿ ದಿಲ್ಲನ್ ಮತ್ತು ಓವಲ್ ಆಫೀಸ್ ಕಾರ್ಯಾಚರಣೆಗಳ ನಿರ್ದೇಶಕಿ ಅನ್ನಿ ಟೊಮಾಸಿನಿ ಇದ್ದಾರೆ. ಅಧ್ಯಕ್ಷರೊಂದಿಗೆ ಪ್ರಧಾನ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಫೈನರ್, ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್, ಭಾಷಣ ಬರವಣಿಗೆಯ ನಿರ್ದೇಶಕ ವಿನಯ್ ರೆಡ್ಡಿ, ಸಂವಹನ ನಿರ್ದೇಶಕ ಬೆನ್ ಲಾಬೋಲ್ಟ್, ವೇಳಾಪಟ್ಟಿ ಮತ್ತು ಅಡ್ವಾನ್ಸ್ ನಿರ್ದೇಶಕ ರಿಯಾನ್ ಮೊಂಟೊಯಾ, ಪ್ರೊಟೊಕಾಲ್‌ನ ಹಂಗಾಮಿ ಮುಖ್ಯಸ್ಥ ಎಥಾನ್ ರೊಸೆಂಜ್‌ವೀಗ್, ಎನ್‌ಎಸ್‌ಸಿ ಸಂಯೋಜಕ ಇಂಡೋ-ಪೆಸಿಫಿಕ್ ಕರ್ಟ್ ಕ್ಯಾಂಪ್ಬೆಲ್, ಕಾರ್ಯತಂತ್ರದ ಸಂವಹನಕ್ಕಾಗಿ ಎನ್‌ಎಸ್‌ಸಿ ಸಂಯೋಜಕ ಜಾನ್ ಕಿರ್ಬಿ, ಶಕ್ತಿ ಮತ್ತು ಹೂಡಿಕೆಯ ಹಿರಿಯ ಸಲಹೆಗಾರ ಅಮೋಸ್ ಹೊಚ್‌ಸ್ಟೈನ್, ಸಂವಹನಗಳ ಉಪನಿರ್ದೇಶಕ ಹರ್ಬಿ ಜಿಸ್ಕೆಂಡ್, ದಕ್ಷಿಣ ಏಷ್ಯಾದ ಹಿರಿಯ ನಿರ್ದೇಶಕಿ, ರಾಷ್ಟ್ರೀಯ ಭದ್ರತಾ ಮಂಡಳಿ ಐಲೀನ್ ಲಾಬಾಚರ್ ಹಾಗೂ ಇತರರು ಇದ್ದಾರೆ.
ಚರ್ಚೆಯ ವಿಷಯಗಳು:ಶ್ವೇತಭವನದ ಪ್ರಕಾರ, ಬೈಡನ್ ಅವರು ಶುಕ್ರವಾರ ಸಂಜೆ ನವದೆಹಲಿಗೆ ಆಗಮಿಸುವರು. ಅಮೆರಿಕ ಅಧ್ಯಕ್ಷರು ಯಶಸ್ವಿ ಜಿ20 ಶೃಂಗಸಭೆಯನ್ನು ಎದುರು ನೋಡುತ್ತಿದ್ದಾರೆ. ಹವಾಮಾನ ಬದಲಾವಣೆಯಂತಹ ಹಲವಾರು ಕಾರಣಗಳು ಮತ್ತು ವಿಶ್ವಬ್ಯಾಂಕ್, ಅಂತಾರಾಷ್ಟ್ರೀಯ ಹಣಕಾಸು ನಿಧಿಗಳಂತಹ ಅಂತಾರಾಷ್ಟ್ರೀಯ ವೇದಿಕೆಗಳ ಸುಧಾರಣೆಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ಅಮೆರಿಕದ ಅಧ್ಯಕ್ಷರಾದ ನಂತರ ಬೈಡನ್ ಅವರಿಗಿದು ಮೊದಲ ಭಾರತ ಪ್ರವಾಸವಾಗಿದೆ. ಜಿ20ಗೆ ಆಫ್ರಿಕನ್ ಯೂನಿಯನ್ ಸೇರ್ಪಡೆ ವಿಚಾರವನ್ನು ಅಮೆರಿಕ ಸ್ವಾಗತಿಸುತ್ತದೆ. ಇದನ್ನು ಇತರೆ ವಿಶ್ವ ನಾಯಕರು ಕೂಡಾ ಬೆಂಬಲಿಸಿದ್ದಾರೆ ಎಂದು ತಿಳಿಸಿದೆ.