ಹಿರೋಷಿಮಾ (ಜಪಾನ್): ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ತಮಾಷೆಯ ದಾಟಿಯಲ್ಲಿ ಆಟೋಗ್ರಾಫ್ ಕೇಳಿದ್ದಾರೆ. ಮೋದಿಯವರು ಹೆಚ್ಚಿನ ಜನಸಂದಣಿಯನ್ನು ಸೂಕ್ತವಾಗಿ ನಿರ್ವಹಿಸುವ ಬಗೆ ಕುರಿತು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಮೆಚ್ಚುಗೆ ವ್ಯಕ್ತಪಡಿಸಿದ ಬಳಿಕ ಬೈಡನ್, ನಿಮ್ಮ ಆಟೋಗ್ರಾಫ್ ಕೊಡಿ ಎಂದು ಹಾಸ್ಯ ಮಾಡಿದರೆಂದು ಮೂಲಗಳು ತಿಳಿಸಿವೆ.
ವಾಷಿಂಗ್ಟನ್ ಡಿಸಿಗೆ ಮುಂದಿನ ತಿಂಗಳು ಮೋದಿ ಭೇಟಿ ನೀಡಲಿದ್ದಾರೆ. ನಿನ್ನೆ ನಡೆದ ಜಿ7 ಮತ್ತು ಕ್ವಾಡ್ ಸಭೆಯ ಸಂದರ್ಭದಲ್ಲಿ ಜೋ ಬೈಡನ್ ಅವರು ಪಿಎಂ ಮೋದಿ ಬಳಿ ಬಂದು ನಿಮ್ಮ ಕಾರ್ಯಕ್ರಮಕ್ಕೆ ಹಾಜರಾಗಲು ಜನರಿಂದ ಹೆಚ್ಚಿನ ಬೇಡಿಕೆ ಕೇಳಿ ಬರುತ್ತಿದ್ದು, ಮನವಿಗಳ ಮಹಾಪೂರವೇ ಹರಿದು ಬರುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಲ್ಲೇ ಉಪಸ್ಥಿತರಿದ್ದ ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರು ಪ್ರತಿಕ್ರಿಯಿಸಿ, ಸಿಡ್ನಿಯಲ್ಲಿ ನಡೆಯಲಿರುವ ಸಮುದಾಯ ಸ್ವಾಗತ ಕಾರ್ಯಕ್ರಮದ ಸ್ಥಳವು 20,000 ಜನರ ಸಾಮರ್ಥ್ಯ ಹೊಂದಿದೆ. ಆದರೂ ಸಹ ಮೋದಿ ಕಾರ್ಯಕ್ರಮಕ್ಕೆ ಬರುತ್ತಿರುವ ವಿನಂತಿಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದರು.
ಆ ನಂತರ, ಪಿಎಂ ಅಲ್ಬನೀಸ್ ಅವರು ತಾವು ಭಾರತಕ್ಕೆ ಭೇಟಿ ನೀಡಿದ ವೇಳೆ ಕ್ರೀಡಾಂಗಣದಲ್ಲಿ 90,000 ಕ್ಕೂ ಹೆಚ್ಚು ಜನರನ್ನು ಮೋದಿ ಸ್ವಾಗತಿಸಿದ ಬಗೆಯನ್ನು ನೆನಪಿಸಿಕೊಂಡರು. ಇದಕ್ಕೆ ಪಕ್ಕದಲ್ಲೇ ಇದ್ದ ಜೋ ಬೈಡನ್, "ನಾನು ನಿಮ್ಮ ಆಟೋಗ್ರಾಫ್ ತೆಗೆದುಕೊಳ್ಳಬೇಕು" ಎಂದು ಪ್ರಧಾನಿ ಮೋದಿಯವರಿಗೆ ಹಾಸ್ಯವಾಗಿ ನುಡಿದರು.
ಇದನ್ನೂ ಓದಿ :ಭಾರತ-ಬ್ರಿಟನ್ ಆಲಿಂಗನ : ರಿಷಿ ಸುನಕ್ ಜೊತೆ ಮೋದಿ ದ್ವಿಪಕ್ಷೀಯ ಮಾತುಕತೆ